ADVERTISEMENT

ಚಿಂಚೋಳಿ | ಕೆಳಗಿನ ಕೇರಿಯಲ್ಲಿ ನೀರಿನ ಸಮಸ್ಯೆ

ವೆಂಕಟಾಪುರ: ರೈತರ ಹೊಲದಿಂದ ನೀರು ತರುತ್ತಿರುವ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 26 ಮೇ 2020, 15:25 IST
Last Updated 26 ಮೇ 2020, 15:25 IST
ಚಿಂಚೋಳಿ ತಾಲ್ಲೂಕು ವೆಂಕಟಾಪುರ ಗ್ರಾಮದ ಕೆಳಗಿನ ಕೇರಿಯಲ್ಲಿ ಕುಡಿಯುವ ನೀರಿನ ಬವಣೆ ಎದುರಾಗಿದ್ದರಿಂದ ಜನರು ರೈತ ವಿಠಲ್ ಕಂಬಾರ ಮನೆಯಿಂದ ನೀರು ತರುತ್ತಿರುವುದು
ಚಿಂಚೋಳಿ ತಾಲ್ಲೂಕು ವೆಂಕಟಾಪುರ ಗ್ರಾಮದ ಕೆಳಗಿನ ಕೇರಿಯಲ್ಲಿ ಕುಡಿಯುವ ನೀರಿನ ಬವಣೆ ಎದುರಾಗಿದ್ದರಿಂದ ಜನರು ರೈತ ವಿಠಲ್ ಕಂಬಾರ ಮನೆಯಿಂದ ನೀರು ತರುತ್ತಿರುವುದು   

ಚಿಂಚೋಳಿ: ತಾಲ್ಲೂಕಿನ ವೆಂಕಟಾಪುರ ಗ್ರಾಮದ ಕೆಳಗಿನ ಕೇರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ನೀರು ಪೂರೈಸುತ್ತಿದ್ದ ಎರಡು ಕೊಳವೆ ಬಾವಿಗಳಲ್ಲಿ ಒಂದು ಬತ್ತಿದೆ. ಇನ್ನೊಂದರ ಮೋಟರ್ ಸುಟ್ಟು ಹೋಗಿ ಮೂರು ದಿನಗಳಾಗಿವೆ. ಇನ್ನೂ ದುರಸ್ತಿ ಮಾಡಿಸಿಲ್ಲ. ಇದರಿಂದ ಕೆಳಗಿನ ಕೇರಿ ಸೇರಿದಂತೆ ಅರ್ಧ ಊರಿನಲ್ಲಿ ನೀರಿನ ಸಮಸ್ಯೆ ಎದುರಾಗಿದೆ.

ಜನರು ರೈತರ ಹೊಲಗಳಿಗೆ ಹೋಗಿ ತರುವುದು ಅನಿವಾರ್ಯವಾಗಿದೆ. ಆದ್ದರಿಂದ ಗ್ರಾಮಕ್ಕೆ ಹೊಸ ಕೊಳವೆ ಬಾವಿ ಕೊರೆಸಬೇಕು ಇಲ್ಲವೇ ಈಗಿರುವ ಕೊಳವೆ ಬಾವಿಗಳ ಆಳ ಹೆಚ್ಚಿಸಬೇಕು ಎಂದು ಅವರು ಮುಖಂಡ ಗೋಪಾಲ ಭಜಂತ್ರಿ ಒತ್ತಾಯಿಸಿದ್ದಾರೆ.

ADVERTISEMENT

ಗ್ರಾಮಕ್ಕೆ ಹೊಂದಿಕೊಂಡಂತಿರುವ ರೈತ ವಿಠಲ್ ಕಂಬಾರ ಅವರು ತಮ್ಮ ತೋಟದ ಕೊಳವೆಬಾವಿಯಿಂದ ಕೊಳವೆ ಮೂಲಕ ಜನರಿಗೆ ನೀರು ಕೊಡುತ್ತಿದ್ದಾರೆ. ಹೀಗೆ ಕೆಳಗಿನ ಕೇರಿಯವರು ಕಂಬಾರ ಹೊಲದಿಂದ ನೀರು ಪಡೆಯುತ್ತಾರೆ. ಉಳಿದ ಬಡಾವಣೆಗಳ ಜನ ನೀರಿಗಾಗಿ ಪರದಾಡುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಫ್ಲೋರೈಡ್ ನೀರು: ವೆಂಕಟಾಪುರ ಗ್ರಾಮದಲ್ಲಿ ಜನ ಫ್ಲೋರೈಡ್ ನೀರು ಸೇವಿಸುತ್ತಿದ್ದಾರೆ. ಇಲ್ಲಿ ಪ್ರತಿ ಲೀಟರ್ ನೀರಿನಲ್ಲಿ 3ರಿಂದ 5 ಮಿಲಿ ಗ್ರಾಂ ಫ್ಲೋರೈಡ್ ಇರುವ ಕುರಿತು ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆ ವರದಿ ಸಲ್ಲಿಸಿ ಹಲವು ವರ್ಷಗಳು ಗತಿಸಿದರೂ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.

ಈ ಕುರಿತು ಗ್ರಾಮೀಣ ನೀರು ಪೂರೈಕೆ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಸವರಾಜ ನೇಕಾರ ಅವರನ್ನು ಕೇಳಿದರೆ, ‘ಲಾಕ್‌ಡೌನ್ ಮುಗಿದ ಮೇಲೆ ಸರ್ಕಾರದಿಂದ ಮಂಜೂರು ಮಾಡಿಸಿ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.