ADVERTISEMENT

ಅಳಂದ: ಯಳಸಂಗಿಯಲ್ಲಿ ನೀರಿಗಾಗಿ ಖಾಲಿ ಕೊಡಗಳೊಂದಿಗೆ ಅಲೆದಾಟ

4 ದಿನಕೊಮ್ಮೆ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 7:06 IST
Last Updated 11 ಏಪ್ರಿಲ್ 2019, 7:06 IST
ಆಳಂದ ತಾಲ್ಲೂಕಿನ ಯಳಸಂಗಿ ಗ್ರಾಮದಲ್ಲಿ ಸುಡು ಬಿಸಿಲಲ್ಲೂ ಮಹಿಳೆಯರು ಕುಡಿಯುವ ನೀರಿಗಾಗಿ ಸರದಿ ನಿಂತ ದೃಶ್ಯ
ಆಳಂದ ತಾಲ್ಲೂಕಿನ ಯಳಸಂಗಿ ಗ್ರಾಮದಲ್ಲಿ ಸುಡು ಬಿಸಿಲಲ್ಲೂ ಮಹಿಳೆಯರು ಕುಡಿಯುವ ನೀರಿಗಾಗಿ ಸರದಿ ನಿಂತ ದೃಶ್ಯ   

ಆಳಂದ (ಕಲಬುರ್ಗಿ ಜಿಲ್ಲೆ): ಒಂದೆಡೆ ಸುಡುವ ಬಿಸಿಲು, ಮತ್ತೊಂದಡೆ ದಿನವಿಡೀ ಖಾಲಿ ಕೊಡ ಕೈಯಲ್ಲಿ ಹಿಡಿದು ಅಲೆದಾಡಿದರೂ ಕುಡಿಯುವ ನೀರು ಸಿಗದ ಪರಿತಾಪವು ಆಳಂದ ತಾಲ್ಲೂಕಿನ ಯಳಸಂಗಿ ಗ್ರಾಮದಲ್ಲಿ ಕಂಡು ಬರುತ್ತಿದೆ. ಮಹಿಳೆಯರು ಹೆಚ್ಚು ಸಂಕಟಪಡುತ್ತಿದ್ದಾರೆ.

ಅಂದಾಜು 9 ಸಾವಿರ ಜನಸಂಖ್ಯೆಯುಳ್ಳ ಯಳಸಂಗಿಯಲ್ಲಿ ಈಗ ಗ್ರಾಮ ಪಂಚಾಯಿತಿಯಿಂದ ನಾಲ್ಕು ದಿನಕ್ಕೊಮ್ಮೆ ನೀರು ಸರಬುರಾಜು ಮಾಡುವ ಪರಿಸ್ಥಿತಿ ಅನಿವಾರ್ಯವಾಗಿದೆ. ಗ್ರಾಮದ ಸಿದ್ದಾರೂಡ ಮಠದ ಸಮೀಪದಲ್ಲಿರುವ ಕೊಳವೆ ಬಾವಿ ಎದುರು ದಿನವಿಡೀ ನೀರು ಪಡೆಯಲು ಜನಜಂಗುಳಿ ಕಾಣುತ್ತಿದೆ. ಇದೊಂದು ಕೊಳವೆ ಬಾವಿ ಬಿಟ್ಟರೆ ಗ್ರಾಮದಲ್ಲಿನ ನಾಲ್ಕು ಕೊಳವೆ ಬಾವಿ ಹಾಗೂ ಮೂರು ತೆರೆದ ಬಾವಿಗಳು ಸಂಪೂರ್ಣವಾಗಿ ಬತ್ತಿವೆ.

ಜನರು ಹಗಲು–ರಾತ್ರಿ ಎನ್ನದೆ ಗ್ರಾಮದ ಸುತ್ತಲಿನ ಹೊಲಗದ್ದೆಗಳಿಗೆ ಹೋಗಿ ಕೊಡಗಳಲ್ಲಿ ನೀರು ಹೊತ್ತುಕೊಂಡು ಬರುತ್ತಿದ್ದಾರೆ. ಸೈಕಲ್, ಬೈಕ್, ಜೀಪ್‌ ಮತ್ತಿತರ ವಾಹನಗಳಲ್ಲಿ ನೀರು ತರುತ್ತಿದ್ದಾರೆ. ಕೆಲ ಶ್ರೀಮಂತರು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ. ಬಿಸಿಲಿನಿಂದಾಗಿ ಹೊಲಗದ್ದೆಗಳಿಗೆ ಹೋಗಿ ನೀರು ತರುವುದು ಕಷ್ಟಕರವಾಗುತ್ತಿದೆ ಎಂದು ಕಾಂತಪ್ಪ ಸವಳೆ ತಿಳಿಸಿದರು.

ADVERTISEMENT

ಹೊಲಗದ್ದೆಗಳಲ್ಲಿನ ಅಶುದ್ಧ ನೀರು ಕುಡಿದು ಜಾನುವಾರುಗಳಿಗೆ ರೋಗ ಬರುವಂತೆ ಆಗಿದೆ ಎಂದು ರೈತರು ಕಳವಳ ವ್ಯಕ್ತಪಡಿಸಿದರು.

ಗ್ರಾಮದಲ್ಲಿನ ನಾಲ್ಕು ಬಡವಾಣೆಗಳ ಜನರು ರಾತ್ರಿಯೆಲ್ಲ ಜಾಗರಣೆ ಮಾಡಿ ನೀರು ತುಂಬಿಕೊಳ್ಳಲು ಹೈರಾಣ ಆಗುವುದು ಕಾಣುತ್ತಿದೆ. ಇಂತಹ ಸಮಸ್ಯೆ ಎದುರಾದರೂ ತಾಲ್ಲೂಕು ಆಡಳಿತವು ಸಮರ್ಪಕ ನೀರು ಪೂರೈಕೆಗೆ ತುರ್ತು ಕಾಳಜಿ, ಕ್ರಮ
ವಹಿಸುತ್ತಿಲ್ಲ.

ಗ್ರಾಮಸ್ಥರ ಒತ್ತಡದ ಮೇರೆಗೆ ಅಧಿಕಾರಿಗಳು ನೀರಿನ ಪರಿಸ್ಥಿತಿ ಕುರಿತು ಮಂಗಳವಾರ ಪರಿಶೀಲನೆ ನಡೆಸಿದ್ದಾರೆ. ಆದರೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಹಿಂದೇಟು ಹಾಕುತ್ತಿರುವುದಕ್ಕೆ ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ದಿನಕ್ಕೆ ಕನಿಷ್ಠ ನಾಲ್ಕು ಟ್ಯಾಂಕರ್ ಬಳಕೆ ಮಾಡಿ ನಿರಂತರ ನೀರು ಪೂರೈಸಬೇಕು. ಅಂದಾಗ ಮಾತ್ರ ಜನರು ಮತ್ತು ವಿಶೇಷವಾಗಿ ಜಾನುವಾರುಗಳಿಗೂ ಅನುಕೂಲ ಆಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.