ADVERTISEMENT

ಕಲ್ಲಂಗಡಿ ಬಂಪರ್ ಇಳುವರಿ: ಭರಪೂರ ಆದಾಯ

ಕಲ್ಲಂಗಡಿ ಬೆಳೆಯ ಸುತ್ತಲೂ ಬೇಲಿಯಂತೆ ಬೆಳೆಸಿದ ಸಾಸಿವೆ ವರದಾನ

ಜಗನ್ನಾಥ ಡಿ.ಶೇರಿಕಾರ
Published 22 ಫೆಬ್ರುವರಿ 2026, 0:21 IST
Last Updated 22 ಫೆಬ್ರುವರಿ 2026, 0:21 IST
ಚಿಂಚೋಳಿ ತಾಲ್ಲೂಕಿನ ದೇಗಲಮಡಿಯ ಸಿದ್ದು ಮಗಿ ಅವರ ತೋಟದಲ್ಲಿ ಕಲ್ಲಂಗಡಿ ಹಣ್ಣುಗಳೊಂದಿಗೆ 
ಚಿಂಚೋಳಿ ತಾಲ್ಲೂಕಿನ ದೇಗಲಮಡಿಯ ಸಿದ್ದು ಮಗಿ ಅವರ ತೋಟದಲ್ಲಿ ಕಲ್ಲಂಗಡಿ ಹಣ್ಣುಗಳೊಂದಿಗೆ    

ಚಿಂಚೋಳಿ: ಪ್ರಸಕ್ತ ವರ್ಷ ಕಲ್ಲಂಗಡಿ ಹಣ್ಣು ಬೇಸಾಯಗಾರರಿಗೆ ಉತ್ತಮ ಬೆಲೆ ಲಭಿಸಿದೆ. ಆದರೆ, ಇಳುವರಿ ನಿರೀಕ್ಷಿತ ಮಟ್ಟದಲ್ಲಿ ಲಭಿಸಿಲ್ಲ. ತಾಲ್ಲೂಕಿನ ದೇಗಲಮಡಿಯ ಪ್ರಗತಿಪರ ರೈತ ಸಿದ್ದು ಮಗಿ ಅವರು 3 ಎಕರೆ ತೋಟದಲ್ಲಿ ಕಲ್ಲಂಗಡಿ ಬೇಸಾಯ ಮಾಡಿ 85 ರಿಂದ 90 ಟನ್ ಇಳುವರಿ ಪಡೆಯುವ ಮೂಲಕ ಭರಪೂರ ಆದಾಯ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.

ಮಳೆಗಾಲದಲ್ಲಿ ಅತ್ಯಧಿಕ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಇದರ ಬೆನ್ನಲ್ಲಿಯೇ ಚಳಿಯೂ ಹೆಚ್ಚಾಗಿರುವುದು ಕಲ್ಲಂಗಡಿ ಬೇಸಾಯಗಾರರಿಗೆ ತೊಡಕಾಗಿತ್ತು. ಅಧಿಕ ಮಳೆ, ಹೆಚ್ಚಿನ ಚಳಿಯಿಂದ ಫಸಲು ಸರಿಯಾಗಿ ಹೂಬಿಟ್ಟು ದುಂಬಿಗಳಿಂದ ಪರಾಗಸ್ಪರ್ಶವಾಗದ ಕಾರಣ ಅಸಮರ್ಪಕ ಸೆಟ್ಟಿಂಗನಿಂದ ಇಳುವರಿ ಬಂದಿಲ್ಲ.

ಆದರೆ, ಸಿದ್ದು ಅವರು ತಮ್ಮ ತೋಟದಲ್ಲಿ ಕಲ್ಲಂಗಡಿ ಬೆಳೆಯ ಸುತ್ತಲೂ ಸಾಸಿವೆ ಕಾಳು ಚೆಲ್ಲಿ ಬೆಳೆಯ ಸುತ್ತಲೂ ಬೇಲಿಯಂತೆ ಸಾಸಿವೆ ಬೆಳೆಸಿದ್ದರು. ಸಾಸಿವೆಗೆ ಹೂವು ಬಿಟ್ಟು ದುಂಬಿಗಳನ್ನು ಹೆಚ್ಚಾಗಿ ಆಕರ್ಷಿಸಿದ್ದರಿಂದ ಕಲ್ಲಂಗಡಿಗೆ ವರದಾನವಾಗಿ ಪರಿಣಮಿಸಿದೆ. ಇದರಿಂದ ಕಲ್ಲಂಗಡಿಗೆ ಪರಾಗಸ್ಪರ್ಶ ಹೆಚ್ಚಾಗಿ ಜೇನು ನೊಣಗಳು ಆಕರ್ಷಿತವಾಗಿದ್ದು ಬಂಪರ್ ಇಳುವರಿಗೆ ಕಾರಣವಾಗಿದೆ.

ADVERTISEMENT

ಇದರ ಜತೆಗೆ ಹಣ್ಣುಗಳು ವ್ಯಾಪಾರಿಗಳು ತೋಟಕ್ಕೆ ಬಂದು ಪ್ರತಿ ಕೆಜಿಗೆ 19 ರಿಂದ 20 ದರ ನೀಡಿ ಕೊಂಡೊಯ್ದಿದ್ದಾರೆ. ಹೀಗೆ ಸುಮಾರು 15 ಲಕ್ಷಕ್ಕೂ ಅಧಿಕ ಆದಾಯ ಗಳಿಸಿದ್ದಾರೆ. ಇದಕ್ಕಾಗಿ ಅವರು ಸುಮಾರು 3 ಲಕ್ಷ ಖರ್ಚು ಮಾಡಿದ್ದಾರೆ. ತಿಪ್ಪೆಗೊಬ್ಬರ ಹಾಕಿ ಹೊಲ ಹದಗೊಳಿಸಿದ್ದು, ಎಚ್.ಎಂ ಕ್ಲೌಜ್ ಕಂಪನಿಯ ಜಂಬೊ ರೆಡ್ ತಳಿಯ ಸಸಿ ತಂದು ನೆಟ್ಟು ಪೋಷಿಸಿದ್ದಾರೆ.

ಮಲ್ಚಿಂಗ್ ಪೇಪರ್ ಮತ್ತು ಹನಿ ನೀರಾವರಿ ಅಳವಡಿಸಿದ್ದಾರೆ. ರೋಗ ರುಜಿನಗಳಿಂದ ರಕ್ಷಿಸಲು ಔಷಧೋಪಚಾರ ನಡೆಸಿದ್ದಾರೆ. ಹೀಗೆ ಬೆಳೆ ಪೋಷಣೆ ಮತ್ತು ಉತ್ತಮ ನಿರ್ವಹಣೆಯಿಂದ ಕೇವಲ 70 ದಿನಗಳಲ್ಲಿ ಆದಾಯ ಪಡೆದಿದ್ದಾರೆ.

ಮಾರುಕಟ್ಟೆಯಲ್ಲಿ ಹಣ್ಣಿನ ಕೊರತೆ, ಮಹಾಶಿವರಾತ್ರಿ ಹಬ್ಬ ಹಾಗೂ ರಂಜಾನ ಮಾಸದ ಹಿನ್ನೆಲೆಯಲ್ಲಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಕೈತುಂಬಾ ಆದಾಯ ಬಂದಿದ್ದು, ಕಲ್ಲಂಗಡಿ ಬೆಳೆಗಾರ ಫುಲ್ ಖುಷ್ ಆಗಿದ್ದಾರೆ. ಸಾಸಿವೆಯೇ ಕೊಯ್ಲಿಗೆ ಬಂದಿದ್ದು ಸುಮಾರು ಒಂದು ಕ್ವಿಂಟಲ್ ಇಳುವರಿ ಬರುವ ಸಾಧ್ಯತೆಯಿದೆ.

ದೇಗಲಮಡಿ ಗ್ರಾಮದಲ್ಲಿ ತೋಟಗಾರಿಕಾ ಬೆಳೆಗಾರರು ಹೆಚ್ಚಾಗಿದ್ದಾರೆ. ಪ್ರಸಕ್ತ ವರ್ಷ ಸಿದ್ದು ಮಗಿ ಅವರ ತೋಟದಲ್ಲಿ ಕಲ್ಲಂಗಡಿ ಅಧಿಕ ಇಳುವರಿ ಬಂದಿದೆ. ಇದಕ್ಕೆ ಅವರ ನಿರಂತರ ಪರಿಶ್ರಮ ಕಾರಣ
- ಸಂಗಪ್ಪ ಭೈರ್, ಕಲ್ಲಂಗಡಿ ಬೆಳೆಗಾರರು ದೇಗಲಮಡಿ
ಕಲ್ಲಂಗಡಿ ಎಕರೆಗೆ 20 ರಿಂದ 25 ಟನ್ ಇಳುವರಿ ಲಭಿಸುತ್ತದೆ. ಗೊಬ್ಬರ ಹಾಕಿ ಚನ್ನಾಗಿ ನಿರ್ವಹಣೆ ಮಾಡಿದರೆ ಎಕರೆಗೆ ಗರಿಷ್ಠ 40 ಟನ್ ಇಳುವರಿಯು ಬಂದಿದೆ. ದೇಗಲಮಡಿ ರೈತ 30 ಟನ್ ಇಳುವರಿ ಪಡೆದಿದ್ದು ಪ್ರಸಕ್ತ ವರ್ಷ ಗಮನಾರ್ಹ ಸಾಧನೆ
- ಸಂತೋಷಕುಮಾರ ಇನಾಂದಾರ, ಜಂಟಿ ನಿರ್ದೆಶಕರು ತೋಟಗಾರಿಕಾ ಇಲಾಖೆ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.