ADVERTISEMENT

ಹೈ.ಕ ಭಾಗ: ಹೆಚ್ಚಿದ ಬಿಸಿಗಾಳಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 20:28 IST
Last Updated 28 ಏಪ್ರಿಲ್ 2019, 20:28 IST

ಕಲಬುರ್ಗಿ: ನೈಋತ್ಯ ಬಂಗಾಳ ಕೊಲ್ಲಿಯಲ್ಲಿನ ಚಂಡಮಾರುತದ ಪರಿಣಾಮದಿಂದಾಗಿ ಹೈದರಾಬಾದ್‌ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ಬಿಸಿಗಾಳಿಯ ವೇಗ ಹೆಚ್ಚಿದೆ. ಇನ್ನೂ ಮೂರು ದಿನ ಇದರ ಆರ್ಭಟ ಮುಂದುವರಿಯಲಿದ್ದು, ಜನರಿಗೆ ಸಂಕಷ್ಟ ಎದುರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

‌ಸಾಮಾನ್ಯವಾಗಿ ಬಿಸಿಗಾಳಿಯ ವೇಗ ಗಂಟೆಗೆ 10 ಕಿ.ಮೀ ಇರುತ್ತದೆ. ಆದರೆ, ಚಂಡಮಾರುತದ ಪರಿಣಾಮ ಗಂಟೆಗೆ 30 ರಿಂದ 40 ಕಿ.ಮೀ. ವೇಗ ಪಡೆದಿದೆ. ಈ ವೇಗ ನಿರಂತರವಾಗಿ ಒಂದೇ ತರ ಇರದೇ ಹೆಚ್ಚು– ಕಡಿಮೆ ಆಗುವುದು ಸಾಮಾನ್ಯ. ಕಲಬುರ್ಗಿ, ಬೀದರ್‌, ರಾಯಚೂರು, ಕೊಪ್ಪಳ, ಯಾದಗಿರಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಇದು ಹೆಚ್ಚು ಪರಿಣಾಮ ಬೀರಲಿದೆ.

‘ಪ್ರಕೃತಿ ವಿಕೋಪದ ಪರಿಣಾಮ ಗಾಳಿಯು ಉತ್ತರ ದಿಕ್ಕಿನಿಂದ ಬೀಸಲಿದೆ. ಹೀಗೆ ಉತ್ತರದಿಂದ ಬೀಸುವ ಗಾಳಿಯಲ್ಲಿ ತೇವಾಂಶದ ಪ್ರಮಾಣ ತೀರ ಕಡಿಮೆ ಇರುತ್ತದೆ’ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಎಸ್‌.ಪಾಟೀಲ ತಿಳಿಸಿದ್ದಾರೆ.

ADVERTISEMENT

‘ಏ.30ರವರೆಗೂ ಬಿಸಿಗಾಳಿ ಮುಂದುವರಿಯಲಿದ್ದು, ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

ಕಲಬುರ್ಗಿ ನಗರದಲ್ಲಿ ಶುಕ್ರವಾರ (ಏ.26) ಈವರೆಗಿನ ಗರಿಷ್ಠ ತಾಪಮಾನ 44.1 ಡಿಗ್ರಿ ಸೆಲ್ಷಿಯಸ್ ದಾಖಲಾಗಿತ್ತು. ಶನಿವಾರ 43 ಡಿಗ್ರಿಗೆ ಇಳಿಕೆಯಾಗಿದ್ದು, ಭಾನುವಾರ ಮತ್ತೆ 44 ಡಿಗ್ರಿ ಸೆಲ್ಷಿಯಸ್‌ಗೆ ಏರಿದೆ. ಹೋದ ವರ್ಷ ಈ ಸಮಯದಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಷಿಯಸ್ ದಾಖಲಾಗಿತ್ತು. ಏಪ್ರಿಲ್‌ ಕೊನೆಯ ವಾರದಲ್ಲೇ ವಾಡಿಕೆಗಿಂತ ಹೆಚ್ಚು ತಾಪಮಾನ ದಾಖಲಾಗಿದ್ದು, ಮೇ ತಿಂಗಳಲ್ಲಿ ಉಷ್ಣಾಂಶ 45 ಡಿಗ್ರಿ ಸೆಲ್ಷಿಯಸ್ ಮೀರುವ ಸಾಧ್ಯತೆ ಇದೆ ಎಂಬುದು ಹವಾಮಾನ ಇಲಾಖೆ ಅಧಿಕಾರಿಗಳ ಅಂದಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.