ಸಾಂದರ್ಭಿಕ ಚಿತ್ರ
ಕಲಬುರಗಿ: ‘ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರಬೇಕು ಎಂದು ಸರ್ಕಾರ ಹೊರಡಿಸಿರುವ ಮೌಖಿಕ ಆದೇಶ ಅವೈಜ್ಞಾನಿಕ ಹಾಗೂ ವಿದ್ಯಾರ್ಥಿ ವಿರೋಧಿಯಾಗಿದೆ’ ಎಂದು ಎಐಡಿಎಸ್‌ಒ ಜಿಲ್ಲಾ ಘಟಕದ ಕಾರ್ಯದರ್ಶಿ ತುಳಜರಾಮ ಎನ್.ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರಕಟನೆ ನೀಡಿರುವ ಅವರು, ‘ಪೂರ್ವ ಸಿದ್ಧತಾ ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಸಿದ್ಧ ಮಾಡಲಾಗುತ್ತದೆ. ಯಾವ ರೀತಿ ಪರೀಕ್ಷೆಗಳನ್ನು ಬರೆಯಬೇಕು, ಉತ್ತರ ಪತ್ರಿಕೆಯ ಮೊದಲ ಪುಟವನ್ನು ಯಾವ ರೀತಿ ಭರ್ತಿ ಮಾಡಬೇಕು ಎಂಬುವುದನ್ನು ಪೂರ್ವಸಿದ್ಧತಾ ಪರೀಕ್ಷೆಯ ವೇಳೆಯೇ ಕಲಿಸಿ ಕೊಡಲಾಗುತ್ತದೆ. ಅದಕ್ಕಾಗಿ ಸರ್ಕಾರವೇ ಉತ್ತರ ಪತ್ರಿಕೆಗಳನ್ನು ಸರಬರಾಜು ಮಾಡಬೇಕಾಗುತ್ತದೆ. ಹೀಗಿರುವಾಗ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರಬೇಕು ಎಂಬ ನಿಲುವು ಅವೈಜ್ಞಾನಿಕ’ ಎಂದಿದ್ದಾರೆ.
‘ಶಿಕ್ಷಣ ಕ್ಷೇತ್ರದ ಅನುದಾನ ಕಡಿತಗೊಳಿಸಲಾಗಿದೆ. ಈಗ ಇಂತಹ ಆದೇಶಗಳ ಮೂಲಕ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಬಡ ಮಕ್ಕಳ ಮೇಲೆ ಹೊರೆ ಹೆರದೇ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.