ADVERTISEMENT

ಮಹಿಳೆ ಕೊಂದು ಮಗಳ ಮೇಲೆ ಅತ್ಯಾಚಾರ: ಅಪರಾಧಿಗೆ ಜೀವಾವಧಿ ಶಿಕ್ಷೆ, ₹3.50 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 18:51 IST
Last Updated 15 ಅಕ್ಟೋಬರ್ 2025, 18:51 IST
.
.   

ಕಲಬುರಗಿ: ನಗರದಲ್ಲಿ ನಡೆದಿದ್ದ ಮಹಿಳೆಯ ಕೊಲೆ ಹಾಗೂ ಅವರ ಮಗಳ ಮೇಲಿನ ಅತ್ಯಾಚಾರ (ಪೋಕ್ಸೊ) ಪ್ರಕರಣದ ಅಪರಾಧಿಗೆ ಕಲಬುರಗಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹3.50 ಲಕ್ಷ ದಂಡ ವಿಧಿಸಿದೆ.

ಶಫಿಶೇಖ್‌ ಡಿ.ಕೆ.(22) ಅಲಿಯಾಸ್ ರೆಹಾನ್‌ ಶಿಕ್ಷೆಗೆ ಒಳಗಾದ ಅಪರಾಧಿ.

2024ರ ಮಾರ್ಚ್‌ 15ರಂದು ನಗರದಲ್ಲಿ ಮಹಿಳೆಯೊಬ್ಬರ ಕೊಲೆ ನಡೆದಿತ್ತು. ಕೊಲೆಗೈದ ಶಫಿಶೇಖ್ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಮಹಿಳೆಯೊಂದಿಗೆ ಜಗಳ ತೆಗೆದು ಕಟ್ಟಿಗೆಯಿಂದ ಹೊಡೆದು, ಸರ್ಜಿಕಲ್‌ ಬ್ಲೇಡ್‌ನಿಂದ ಚುಚ್ಚಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದ. ಬಳಿಕ ಆ ಮಹಿಳೆಯ ಅಪ್ರಾಪ್ತ ಮಗಳನ್ನು ಕರೆದೊಯ್ದು ಅತ್ಯಾಚಾರ ಎಸೆಗಿದ್ದ.

ADVERTISEMENT

ಈ ಕುರಿತು ಮೃತ ಮಹಿಳೆಯ ತಾಯಿ ಕಲಬುರಗಿಯ ಸಬರ್ಬನ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣ ತನಿಖೆ ನಡೆಸಿದ್ದ ಇನ್‌ಸ್ಪೆಕ್ಟರ್‌ ಮಹ್ಮದ್‌ ಫಸಿಯೋದ್ದೀನ್‌ ಅವರು ಶಫಿಶೇಖ್‌ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ಪೋಕ್ಸೊ) ಮಹ್ಮದ್ ಮುಜೀರ್‌ ಉಲ್ಲಾ ಸಿ.ಜಿ., ಅಪರಾಧಿಗೆ ಪೋಕ್ಸೊ ಕಾಯ್ದೆಗಳಿಗೆ ಸಂಬಂಧಿಸಿದಂತೆ 20 ವರ್ಷ ಜೈಲು ಶಿಕ್ಷ ಹಾಗೂ ಜೊತೆಗೆ ₹2.50 ದಂಡ ವಿಧಿಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿ ಆದೇಶಿಸಿದ್ದಾರೆ.

ಅಲ್ಲದೇ, ನೊಂದ ಬಾಲಕಿಗೆ ಕಾನೂನು ಪ್ರಾಧಿಕಾರದಿಂದ ₹5 ಲಕ್ಷ ಪರಿಹಾರ ನೀಡುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.

ಈ ‍ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ(ಪೋಕ್ಸೊ) ಶಾಂತವೀರ ಬಿ.ತುಪ್ಪದ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.