ADVERTISEMENT

ಟಿಪ್ಪರ್ ಹಾಯ್ದು ಮಹಿಳೆ ಸ್ಥಳದಲ್ಲೇ ಸಾವು

ಉದ್ರಿಕ್ತ ನಿವಾಸಿಗಳಿಂದ ಗಂಟೆಗೂ ಅಧಿಕ ಕಾಲ ರಸ್ತೆ ತಡೆ; ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 15:10 IST
Last Updated 6 ಡಿಸೆಂಬರ್ 2021, 15:10 IST
ಕಲಬುರಗಿಯ ಹಾಗರಗಾ ಕ್ರಾಸ್ ಬಳಿ ಸಂಭವಿಸಿದ ಡಿಕ್ಕಿ ಹಿನ್ನೆಲೆಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿ ನಿವಾಸಿಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು
ಕಲಬುರಗಿಯ ಹಾಗರಗಾ ಕ್ರಾಸ್ ಬಳಿ ಸಂಭವಿಸಿದ ಡಿಕ್ಕಿ ಹಿನ್ನೆಲೆಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿ ನಿವಾಸಿಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು   

ಕಲಬುರಗಿ: ನಗರದ ಹಾಗರಗಾ ಕ್ರಾಸ್ ಬಳಿಯ ಸನಾ ಹೋಟೆಲ್ ಬಳಿ ಸೋಮವಾರ ಸಂಜೆ ಟಿಪ್ಪರ್ ಹಾಯ್ದು ಸ್ಕೂಟರ್‌ನಲ್ಲಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಪತಿ ಹಾಗೂ 7 ವರ್ಷದ ಮಗುವಿಗೆ ಗಾಯಗಳಾಗಿವೆ.

ಸೀತಾಬಾಯಿ ನಾಗೇಂದ್ರ (50)ಮೃತಪಟ್ಟವರು. ಅವರ ಪತಿ ನಾಗೇಂದ್ರ ಹಾಗೂ ಅವರ ಮೊಮ್ಮಗ ಜೊತೆಯಲ್ಲಿದ್ದ. ಎರಡು ಟಿಪ್ಪರ್‌ ಲಾರಿಗಳು ಬರುತ್ತಿರುವುದನ್ನು ಗಮನಿಸಿದ ನಾಗೇಂದ್ರ ಅವರು ಸ್ಕೂಟರ್‌ ತಿರುಗಿಸಿದರು. ಹಿಂದಿನಿಂದ ಬಂದ ಲಾರಿಯು ಸೀತಾಬಾಯಿ ಅವರ ಮೇಲೆ ಹಾಯ್ದಿದ್ದರಿಂದ ತಲೆಯ ಭಾಗ ಛಿದ್ರವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಪಘಾತ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಹಾಗರಗಾ ಕ್ರಾಸ್‌ ನಿವಾಸಿಗಳು ರಿಂಗ್ ರಸ್ತೆಯಲ್ಲೇ ಸಂಚರಿಸಬೇಕಿರುವುದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಸರ್ವಿಸ್ ರಸ್ತೆ ನಿರ್ಮಿಸಿಕೊಡಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಸುಮಾರು ಎರಡು ಗಂಟೆ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಕಿಲೋ ಮೀಟರ್‌ಗಟ್ಟಲೇ ವಾಹಗನಳು ರಸ್ತೆಯಲ್ಲೇ ನಿಂತಿದ್ದವು. ಇದರಿಂದಾಗಿ ಪ್ರಯಾಣಿಕರು ಪರದಾಡಿದರು.

ADVERTISEMENT

ಮೂರು ದಿನಗಳ ಹಿಂದೆ ಇದೇ ಸ್ಥಳದಲ್ಲಿ ಟಿಪ್ಪರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಇದಾದ ಬಳಿಕ ಈ ಘಟನೆ ನಡೆದಿದ್ದರಿಂದ ಜನರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದರು.

ಖರ್ಗೆ ಪೆಟ್ರೋಲ್‌ ಪಂಪ್‌ನಿಂದ ಹಾಗರಗಾ ಕ್ರಾಸ್‌ ಸುತ್ತಲೂ ಜನವಸತಿ ಪ್ರದೇಶವಿದ್ದು, ರಿಂಗ್ ರಸ್ತೆಯನ್ನು ಬಳಸಿಕೊಂಡೇ ಸಂಚರಿಸಬೇಕಿದೆ. ಇದರಿಂದಾಗಿ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದ್ದು, ಕೂಡಲೇ ಸರ್ವಿಸ್ ರಸ್ತೆ ನಿರ್ಮಿಸಬೇಕು ಎಂದು ಮುಖಂಡರಾದ ಇಮ್ತಿಯಾಜ್ ಸಿದ್ದಿಕಿ, ಅಲಂದರ್ ಜೈದಿ, ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ನಿವಾಸಿಗಳು ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.