ADVERTISEMENT

ಮಳೆಗಾಲದಲ್ಲಿ ಎದುರಾದ ವಿಸ್ಮಯ!

ಚಿಂಚೋಳಿ: ನೀರಿಲ್ಲದೇ ಬತ್ತಿ ಹೋದ ಪಾಪನಾಶ ಬುಗ್ಗೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2018, 17:37 IST
Last Updated 30 ಜೂನ್ 2018, 17:37 IST
ಚಿಂಚೋಳಿ ಹೊರ ವಲಯದ ಪಂಚಲಿಂಗೇಶ್ವರ ಪಾಪನಾಶ ಬುಗ್ಗೆ ಬತ್ತಿ ಹೋಗಿರುವುದು
ಚಿಂಚೋಳಿ ಹೊರ ವಲಯದ ಪಂಚಲಿಂಗೇಶ್ವರ ಪಾಪನಾಶ ಬುಗ್ಗೆ ಬತ್ತಿ ಹೋಗಿರುವುದು   

ಚಿಂಚೋಳಿ: ಪಟ್ಟಣದ ಹೊರ ವಲಯದ ಮುಲ್ಲಾಮಾರಿ ನದಿ ದಂಡೆಯಲ್ಲಿರುವ ಪಂಚಲಿಂಗೇಶ್ವರ ಪಾಪನಾಶ ಬುಗ್ಗೆ ಮಳೆಗಾಲದಲ್ಲಿ ಬತ್ತುವ ಮೂಲಕ ಜನರಲ್ಲಿ ಅಚ್ಚರಿ ಮೂಡಿಸಿದೆ.

ಪ್ರಸಕ್ತ ವರ್ಷ ಮುಂಗಾರು ಬೇಗ ಆರಂಭವಾಗಿದೆ. ಎಫ್ರಿಲ್‌ ಮೇ ತಿಂಗಳಲ್ಲೂ ಮಳೆಯಾಗಿದೆ. ಕಾಕತಾಳಿಯ ಎನ್ನುವಂತೆ ಮೇ ತಿಂಗಳ ಕೊನೆಯವರೆಗೂ ಪಂಚಲಿಂಗೇಶ್ವರ ಬುಗ್ಗೆಯಲ್ಲಿ ಹರಿಯುತ್ತಿದ್ದ ನೀರು ಮಳೆಗಾಲ ಆರಂಭವಾದ ಮೇಲೆ ಬತ್ತಿ ಹೋಗಿದೆ. ಜೂನ್‌ 1ರಂದು, 7ರಂದು ಹಾಗೂ 22ರಂದು ಮತ್ತು 23ರಂದು ಉತ್ತಮ ಮಳೆಯಾಗಿದೆ. ಆದರೆ ಬುಗ್ಗೆ ಮಾತ್ರ ನೀರಿಲ್ಲದೇ ಭಣಗುಡುತ್ತಿದೆ. ಪ್ರತಿವರ್ಷ ಏಪ್ರಿಲ್‌ ಕೊನೆಯ ಇಲ್ಲವೇ ಮೇ ಕೊನೆಯ ವಾರದಲ್ಲಿ ಬತ್ತುತ್ತಿದ್ದ ಬುಗ್ಗೆ ಪ್ರಸಕ್ತ ವರ್ಷ ಮಳೆ ಸುರಿಯುತ್ತಿದ್ದರೂ ಮಳೆಗಾಲದಲ್ಲಿ ಬತ್ತಿ ಜನರು ಹುಬ್ಬೇರಿಸುವಂತೆ ಮಾಡಿದೆ. ಜೂನ್‌ ತಿಂಗಳಲ್ಲಿ 208 ಮಿ.ಮೀ ಮಳೆ ಸುರಿದಿದೆ. ಇದು ವಾಡಿಕೆ ಮಳೆಗಿಂತ ಶೇ 19ರಷ್ಟು ಹೆಚ್ಚಾಗಿದೆ.

ಪಂಚಲಿಂಗೇಶ್ವರ ಪಾಪನಾಶ ಬುಗ್ಗೆಯಲ್ಲಿ ಐದು ಶಿವಲಿಂಗಗಳನ್ನು ಒಂದೊಂದು ಮಟ್ಟದಲ್ಲಿ ಸ್ಥಾಪಿಸಲಾಗಿದೆ. ಸದಾ ನೀರು ಹರಿಯುತ್ತ ಲಿಂಗಗಳ ಸುತ್ತಲೂ ಗಂಗೆಯ ಜುಳು ಜುಳು ನಾದ ಝೇಂಕರಿಸುತ್ತಿದ್ದ ಬುಗ್ಗೆಯಲ್ಲಿ ಸದ್ದು ನಿಂತು ಹೋಗಿದೆ. ಇದರ ಪಕ್ಕದಲ್ಲಿಯೇ ಇರುವ ಸ್ನಾನದ ತೊಟ್ಟಿಯ ಇನ್ನೊಂದು ಬುಗ್ಗೆಯಲ್ಲಿ ಎಂದಿನಂತೆ ನೀರು ಹರಿಯುತ್ತಿರುವುದು ಕಾಣಬಹುದಾಗಿದೆ. ಪ್ರಕೃತಿಯ ವಿಸ್ಮಯ ಅಚ್ಚರಿಗೆ ಕಾರಣವಾಗಿದೆ.

ADVERTISEMENT

10 ಮೀಟರ್‌ ಪಕ್ಕದಲ್ಲಿ ಬುಗ್ಗೆ ಬತ್ತಿದರೆ ಇನ್ನೊಂದು ಬುಗ್ಗೆ ಉಕ್ಕಿ ಹರಿಯುವುದು ಕುತೂಹಲ ಸೃಷ್ಟಿಸಿದೆ ಎನ್ನುತ್ತಾರೆ ಪ್ರವಾಸಿ ಯುವಕ ಶಿವಕುಮಾರ ಗುಡಪಳ್ಳಿ. 1972ರಲ್ಲಿ ಈ ಭಾಗ ಭೀಕರ ಬರ ಎದುರಿಸಿದೆ. ಅಂದು ಇಲ್ಲಿಯ ಸ್ನಾನ ತೊಟ್ಟಿಯ ಬುಗ್ಗೆಯಿಂದ ಚಿಂಚೋಳಿ ಸುತ್ತಲಿನ 30 ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಇದೇ ಬುಗ್ಗೆಯಿಂದ ಪೂರೈಸಲಾಗಿದೆ ಎಂದು ಸ್ಮರಿಸುತ್ತಾರೆ ಚಿಂಚೋಳಿ ಪಟ್ಟಣದ ಹಿರಿಯರು. ಆದರೆ ಶಿವಲಿಂಗಗಳಿರುವ ಬುಗ್ಗೆ ಆಗಾಗ ಬತ್ತುತ್ತದೆ ಆದರೆ ಬಳೆಗಾಲದಲ್ಲಿ ಬತ್ತಿರುವುದು ಇದೇ ಮೊದಲು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.