ADVERTISEMENT

International Yoga Day 2021: ಭರವಸೆಯ ಯೋಗ ಸಾಧಕಿ ಕಾವ್ಯಾ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 2:35 IST
Last Updated 21 ಜೂನ್ 2021, 2:35 IST
ಕಾವ್ಯಾ
ಕಾವ್ಯಾ   

ಕಲಬುರ್ಗಿ:ಇಲ್ಲಿನ ಹಿಂಗುಲಾಂಬಿಕಾ ಆಯುರ್ವೇದ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ಕಾವ್ಯಾ ಕಟಗಿಹಳ್ಳಿ ಅವರು ಭರವಸೆಯ ಯೋಗಪಟುವಾಗಿ ಹೊರಹೊಮ್ಮಿದ್ದಾರೆ. ಎಸ್ಸೆಸ್ಸೆಲ್ಸಿ ಇರುವಾಗಲೇ ರಾಷ್ಟ್ರಮಟ್ಟದ ಯೋಗ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಸಾಧಿಸಿದ ಅವರು, ಈಗ ಕಿರಿಯರಿಗೆ ಯೋಗ ಪಾಠವನ್ನೂ ಮಾಡುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಕನೂರಿನವರಾದ ಕಾವ್ಯಾ ಶಿಕ್ಷಣದ ಉದ್ದೇಶದಿಂದ ಕಲಬುರ್ಗಿಯಲ್ಲೇ ನೆಲೆಸಿದ್ದಾರೆ. ತಂದೆ ಕಲ್ಲಪ್ಪ ಶಿಕ್ಷಕರು, ತಾಯಿ ಸುಮಂಗಲಾ ಗೃಹಿಣಿ. ನವೋದಯ ಶಾಲೆಯಲ್ಲಿ ಶಿಕ್ಷಣ ಪಡೆಯುವಾಗಲೇ ಕಾವ್ಯಾ ಅವರು ಯೋಗದತ್ತ ಆಕರ್ಷಿತರಾದರು.

ತಮ್ಮ 8ನೇ ತರಗತಿ ಅಭ್ಯಾಸ ಮಾಡುವಾಗ ವಿವಿಧ ಹಂತದ ಯೋಗ ಸ್ಪರ್ಧೆಗಳಲ್ಲಿ ಮಿಂಚಿದರು. 9 ಹಾಗೂ 10ನೇ ತರಗತಿಯಲ್ಲಿದ್ದಾಗ ಮೆಹಬೂಬ್‌ನಗರದಲ್ಲಿ ನಡೆದ ವಿಭಾಗ ಮಟ್ಟದ ಯೋಗಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಿಟ್ಟಿಸಿದರು. 2014ರಲ್ಲಿ ಹರಿದ್ವಾರದಲ್ಲಿ ನಡೆದ ರಾಷ್ಟ್ರೀಯ ಯೋಗ ಚಾಂಪಿಯನ್‌ಷಿಪ್‌ನಲ್ಲೂ ಐದನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

ADVERTISEMENT

ಕಲಬುರ್ಗಿಯಲ್ಲಿ ನಡೆದ ದಕ್ಷಿಣ ಭಾರತ ಯೋಗ ಚಾಂಪಿಯನ್‌ಷಿಪ್‌ ಸೇರಿದಂತೆ ಅನೇಕ ಕಡೆ ಜಿಲ್ಲೆ, ವಿಭಾಗ ಮಟ್ಟದಲ್ಲೂ ಅವರು ಬಹುಮಾನಗಳ ಬುಟ್ಟಿಯನ್ನೇ ಹೊತ್ತು ತಂದಿದ್ದಾರೆ. ಪ್ರಬುದ್ಧ ಯೋಗಪಟುವಾದ ಮೇಲೆ ಅವರು ಕಿರಿಯರಿಗೆ ಅದನ್ನು ಹೇಳಿಕೊಡುತ್ತಿದ್ದಾರೆ.

ಯೋಗ ಮಾಡಿದರಷ್ಟೇ ಸಾಲದು...

‘ಬಹಳಷ್ಟು ಜನರಿಗೆ ತಪ್ಪು ತಿಳಿವಳಿಕೆ ಇದೆ. ನಾವು ಚೆನ್ನಾಗಿ ಯೋಗಾಸನ ಮಾಡಿದರೆ ಸಾಕು ಎಂದುಕೊಳ್ಳುತ್ತಾರೆ. ಆದರೆ, ಯೋಗದ ಆಸನಗಳನ್ನಷ್ಟೇ ಮಾಡಿಬಿಟ್ಟರೆ ಅದು ದೈಹಿಕ ಶ್ರಮ ಎನ್ನಿಸುತ್ತದೆ. ಅದಕ್ಕೆ ಪೂರಕ ಕ್ರಿಯೆಗಳನ್ನೂ ಪ್ರಾಣಾಯಾಮದ ಮೂಲಕ ಮಾಡಬೇಕು. ಆಗ ಮಾತ್ರ ದೇಹ ಹಾಗೂ ಮನಸ್ಸು ಸಮಸ್ಥಿತಿಗೆ ಬರುತ್ತದೆ...’

ಯೋಗ ಪರಿಣತರಾದ, ಆಯುರ್ವೇದ ವೈದ್ಯೆ ಡಾ.ಶ್ವೇತಾ ಸಾವಳಗಿ ಅವರ ಸಲಹೆ ಇದು. ಕಲಬುರ್ಗಿಯ ಶಿವಾನಂದ ಸಾವಳಗಿ ಹಾಗೂ ಶಂಕರಬಾಯಿ ಅವರ ಪುತ್ರಿ. ಬಿಎಎಂಎಸ್‌ ಪದವಿ ಮುಗಿದ ಬಳಿಕ ಅವರು ರೆಸಿಡೆಂಟಲ್‌ ಡಾಕ್ಟರ್‌ ಆಗಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೂ ಯೋಗಪಟುವಾಗಿ ಗುರುತಿಸಿಕೊಂಡಿರುವ ಅವರು, ವೈದ್ಯರಾದ ಮೇಲೆ ರೋಗಿಗಳಿಗೂ ಅದೇ ರೂಢಿ ಮಾಡಿಸುತ್ತಿದ್ದಾರೆ.

ಯೋಗ ಹಾಗೂ ಪ್ರಾಣಾಯಾಮದ ಮಹತ್ವವನ್ನು ಕೋವಿಡ್‌ ಇಡೀ ಪ್ರಪಂಚ ಅರ್ಥ ಮಾಡಿಸಿದೆ ಎನ್ನುವುದು ಅವರ ಅನುಭವ.

‘ಕೋವಿಡ್‌ನಿಂದ ಆಮ್ಲಜನಕ ಪ್ರಮಾಣ ಕುಸಿದು ಸಾಕಷ್ಟು ಜನ ಮೃತಪಟ್ಟರು. ಹಲವರು ಆಮ್ಲಜನಕ ಸಿಲಿಂಡರ್‌ಗಾಗಿ ದಿನವಿಡೀ ಕಾದರು. ಆದರೆ, ಪ್ರಾಣಾಯಾಮ ಕ್ರಿಯೆಗಳಿಂದ ನಮ್ಮ ದೇಹದಲ್ಲಿ ನಾವೇ ಆಮ್ಲಜನಕ ಪ್ರಮಾಣ ವೃದ್ಧಿಸಿಕೊಳ್ಳಲು ಸಾಧ್ಯವಿದೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ... ಈ ಎಂಟು ಕ್ರಿಯೆಗಳನ್ನು ಮಾಡಿದರೆ ಮಾತ್ರ ದೇಹ ಸಮಸ್ಥಿತಿಗೆ ಬರುತ್ತದೆ‌’ ಎಂದು ಅವರು ತಿಳಿಸಿದರು.

‘ಕೆಲವರು ಕೇವಲ ಆಸನ ಮಾಡುತ್ತ ಹೋಗುತ್ತಾರೆ; ಅದರಿಂದ ಏನೂ ಉಪಯೋಗವಿಲ್ಲ ಎಂದು ಭಾವಿಸುತ್ತಾರೆ. ಈ ಎಂಟೂ ಕ್ರಿಯೆಗಳನ್ನು ಕೆಲವೇ ದಿನ ಅನುಸರಿಸಿದರೂ ಆರೋಗ್ಯದಲ್ಲಿ ಆಗಿರುವ ಸುಧಾರಣೆ ಗೊತ್ತಾಗುತ್ತದೆ. ಉಸಿರಾಟದ ಕ್ರಿಯೆಗಳಿಂದ ಶ್ವಾಸಕೋಶದಲ್ಲಿನ ಇಂಗಾಲದ ಡೈಆಕ್ಸೈಡ್‌ ನಿವಾರಣೆಯಾಗಿ, ದೇಹ ಶುದ್ಧ ಹಾಗೂ ಸಮರ್ಥವಾಗುತ್ತದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.