ADVERTISEMENT

ಯಾದಗಿರಿ: ಬಾಲಕಿ ಅಪಹರಿಸಿದ್ದ ಬಂಧಿತ ಆರೋಪಿ ಪರಾರಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 7:18 IST
Last Updated 21 ಜುಲೈ 2025, 7:18 IST
   

ಯಾದಗಿರಿ: ಕೊಡೇಕಲ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ 17 ವರ್ಷದ ಬಾಲಕಿಯನ್ನು ಅಪಹರಿಸಿದ ಆರೋಪದಡಿ ಬಂಧಿತನಾಗಿದ್ದವ ವೈದ್ಯಕೀಯ ತಪಾಸಣೆಯ ವೇಳೆ ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದಾನೆ.

ಹೈದರಬಾವಿದೊಡ್ಡಿಯ ದೇವಪ್ಪ ಅಲಿಯಾಸ್ ದೇವರಾಜ ಹಣಮಂತ (21) ತಪ್ಪಿಸಿಕೊಂಡ ಆರೋಪಿ. ಈ ಬಗ್ಗೆ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕಿಯ ಅಪಹರಣ ಹಾಗೂ ಪೋಕ್ಸೊ ಕಾಯ್ದೆ ಅಡಿ ದೇವಪ್ಪ ಅವರನ್ನು ಬಂಧಿಸಲಾಗಿತ್ತು. ಕೋಡೆಕಲ್ಲ ಎಎಸ್‌ಐ ಸಂಗಪ್ಪ ಮೇಗಲಮನಿ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ ಯಲ್ಲಪ್ಪ ಅವರು ಬಂಧಿತ ಆರೋಪಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರಿಪಡಿಸಬೇಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ 19ರ ಸಂಜೆ ಆರೋಪಿಯನ್ನು ಸುರಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಲಾಗುತ್ತಿತ್ತು. ವೈದ್ಯರ ಪರೀಕ್ಷಾ ವರದಿಗೆ ಸಹಿ ಮಾಡುವಾಗ ಆರೋಪಿಯು ಪೊಲೀಸರನ್ನು ತಳ್ಳಿ, ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಬೆನ್ನು ಹತ್ತಿದರೂ ಸಿಗಲಿಲ್ಲ. ಆಸ್ಪತ್ರೆಯ ಸುತ್ತ, ಗಾಂಧಿ ಚೌಕ್, ಬಸ್ ನಿಲ್ದಾಣದಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಕರ್ತವ್ಯಕ್ಕೆ ಅಡ್ಡಪಡಿಸಿ, ಬಂಧನದಿಂದ ತಪ್ಪಿಸಿಕೊಂಡ ಆರೋಪದಡಿ ಬಿಎನ್‌ಎಸ್ ಸೆಕ್ಷನ್ 132, 262 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದಿದ್ದಾರೆ.

ADVERTISEMENT

ಆರೋಪಿ ಎಸಗಿದ್ದು ಏನು?: ಆರೋಪಿ ದೇವಪ್ಪ ಅವರು ಶಾಲೆ ಬಿಟ್ಟು ಮನೆಯಲ್ಲಿದ್ದ 17 ವರ್ಷದ ಬಾಲಕಿಯ ಜೊತೆಗೆ ಸಲುಗೆಯಿಂದ ಮಾತನಾಡುತ್ತಿದ್ದ. ಬಾಲಕಿಯ ಪೋಷಕರ ಬುದ್ಧಿ ಮಾತಿಗೂ ಕಿವಿಗೊಡದೆ, ಬಾಲಕಿಯ ಜತೆಗೆ ಮಾತನಾಡುವುದನ್ನು ಮುಂದುವರೆಸಿದ್ದ. ಜುಲೈ 12ರ ರಾತ್ರಿ ವೇಳೆ ಬಾಲಕಿಯನ್ನು ಅಪಹರಿಸಿಕೊಂಡು ಹೋದ ಆರೋಪದಡಿ ಪೋಷಕರು ದೇವಪ್ಪ ವಿರುದ್ಧ ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.