ADVERTISEMENT

ಯಡ್ರಾಮಿ: ‘ಕನ್ನಡಿಗರು ನಾಡು–ನುಡಿಯ ಹಿರಿಮೆ ಎತ್ತಿ ಹಿಡಿಬೇಕು’

ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ: ಅಮೃತ ಡಿ.ದೊಡ್ಮನಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 7:26 IST
Last Updated 23 ಫೆಬ್ರುವರಿ 2026, 7:26 IST
ಯಡ್ರಾಮಿ ಪಟ್ಟಣದ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗಣ್ಯರು, ಮಠಾಧೀಶರು ಚಾಲನೆ ನೀಡಿದರು
ಯಡ್ರಾಮಿ ಪಟ್ಟಣದ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗಣ್ಯರು, ಮಠಾಧೀಶರು ಚಾಲನೆ ನೀಡಿದರು   

ಯಡ್ರಾಮಿ: ‘ನೆಲ–ಜಲ, ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಹಿರಿಮೆಯನ್ನು ಎತ್ತಿ ಹಿಡಿಯುವುದು ಕನ್ನಡಿಗ ಆದ್ಯ ಕರ್ತವ್ಯವಾಗಿದೆ’ ಎಂದು ಯಡ್ರಾಮಿ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಅಮೃತ ಡಿ.ದೊಡ್ಮನಿ ಅಭಿಪ್ರಾಯಪಟ್ಟರು.

ಪಟ್ಟಣದ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ  ಮಾಡಿದ ಅವರು, ‘ನಾಡು-ನುಡಿ ಹಾಗೂ ಸಾಹಿತ್ಯ ಉಳಿಸಲು ಪ್ರತಿಯೊಬ್ಬರು ಶ್ರಮ ವಹಿಸಬೇಕಾಗುತ್ತದೆ. ಕನ್ನಡ ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಹಾಗೂ ಪರಿಷತ್ತಿನಿ ಕಾರ್ಯ ಚಟುವಟಿಕಗಳಿಗಾಗಿ ತಾಲ್ಲೂಕು, ಜಿಲ್ಲಾ ಘಟಕಕ್ಕೆ ಸರ್ಕಾರ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.

‘ಪಟ್ಟಣದ ಪ್ರಮುಖ ರಸ್ತೆಗಳಿಗೆ ಸಾಹಿತಿಗಳು, ಸಂಗೀತಗಾರರು ಹಾಗೂ ಹೋರಾಟಗಾರರ ಹೆಸರಿಡಬೇಕು, ಪಟ್ಟಣದಲ್ಲಿ ಬಸ್ ಡಿಪೋ, ಪ್ರಜಾಸೌಧ ಸೇರಿದಂತೆ ತಾಲ್ಲೂಕಿನ ಬಹುತೇಕ ಕಡೆ ಮರಿಚೀಕೆಯಾಗಿರುವ ಸೌಕರ್ಯಗಳು ಒದಗಿಸಬೇಕು. ಮಲ್ಲಾಬಾದ್ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಬೇಕು. ಕನ್ನಡ ಭವನ, ಕಡಕೋಳ ಮಡಿವಾಳಪ್ಪನವರ ಹೆಸರಿನಲ್ಲಿ ಸೂಫಿ ಸಾಹಿತ್ಯ ಅಧ್ಯಯನ ಹಾಗೂ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು’ ಎದು ಆಗ್ರಹಿಸಿದರು.

ADVERTISEMENT

ನಂತರ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ‘ಜೀವನಕ್ಕೆ ಇಂಗ್ಲಿಷ್ ಭಾಷೆ ಅಗತ್ಯವಿರಬಹುದು. ಆದರೆ, ನಮ್ಮ ಮಾತೃಭಾಷೆ ಕನ್ನಡ ಮರೆಯಬಾರದು. ಆಧುನಿಕತೆಯ ಪರಿಣಾಮದಿಂದ ಕನ್ನಡ ಭಾಷೆ ಬಳಕೆ ಕಡಿಮೆಯಾಗುತ್ತಿದೆ. ತಂದೆ–ತಾಯಿಗಳು ಮನೆಯಲ್ಲೇ ಮಕ್ಕಳಿಗೆ ಕನ್ನಡ ಬಳಸಲು ಪ್ರೇರೆಪಿಸಬೇಕು, ಜತೆಗೆ ಎಲ್ಲರೂ ಕನ್ನಡ ಉಳಿಸಿ ಬೆಳೆಸಬೇಕು’ ಎಂದು ಹೇಳಿದರು.

‘ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಅಭಿರುಚಿ ಮತ್ತು ಆಸಕ್ತಿ ಹೆಚ್ಚಿಸಿದಾಗ ಕನ್ನಡ ಉಳಿಸಿ, ಬೆಳೆಸುವ ಕೆಲಸ ಒಟ್ಟಾಗಿ ಮಾಡಿದಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಆಲೂರಿನ ಕೆಂಚವೃಷಭೇಂದ್ರ ಶಿವಾಚಾರ್ಯರು, ಕಡಕೋಳದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಚಿಗರಳ್ಳಿ ಕ್ರಾಸ್‌ನ ಸಿದ್ದಬಸವ ಕಬೀರ ಸ್ವಾಮೀಜಿ, ಮಾಗಣಗೇರಾದ ಏಕಾಕ್ಷರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ.ಗದ್ದುಗೆ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ತಾಲ್ಲೂಕು ಅಧ್ಯಕ್ಷ ನಾಗಪ್ಪ ಸಜ್ಜನ್, ಪ್ರಮುಖರಾದ ಭೀಮರಾಯಗೌಡ ಹಿರೇಗೌಡರ, ಉಪನ್ಯಾಸಕ ನಿಜಲಿಂಗ ದೊಡ್ಡಮನಿ, ಬಸವರಾಜ ಖಾನಗೌಡರ, ಶಾಂತಪ್ಪ ಕೂಡಲಗಿ, ಅಲ್ಲಾಪಟೇಲ್ ಚಿಂಚೋಳಿ, ಬಸವರಾಜಗೌಡ ಪಾಟೀಲ, ವಿಶ್ವನಾಥ ಪಾಟೀಲ, ಈರಣ್ಣ ಭಜಂತ್ರಿ, ಶಫಿಉಲ್ಲಾ ದಖನಿ, ಬಸವರಾಜ ಕಲಕೇರಿ, ದೇವಿಂದ್ರ ಬಡಿಗೇರ, ಭಗವಂತರಾಯಗೌಡ ಬಿರಾದಾರ ಸೇರಿದಂತೆ ಅಪಾರ ಸಾಹಿತ್ಯಸಕ್ತರು ಪಾಲ್ಗೊಂಡಿದ್ದರು.

ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು

  • ಎಲ್‌ಬಿಕೆ ಆಲ್ದಾಳ ಕವಿ ಹೆಸರಿನಿಂದ ಗ್ರಂಥಾಲಯ ನಿರ್ಮಾಣ

  • ರಾಮತೀರ್ಥವನ್ನು ಪ್ರಾಚ್ಯ ವಸ್ತು ಇಲಾಖೆಯಿಂದ ಕಾಯಕಲ್ಪ ಕಲ್ಪಿಸಬೇಕು

  • ಮಲ್ಲಾಬಾದ್ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಬೇಕು

  • ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಸರ್ದಾರ ಶರಣಗೌಡ ವೃತ್ತದ ವರೆಗಿನ ರಸ್ತೆಗೆ ಮಡಿವಾಳೇಶ್ವರ ಮಾರ್ಗವೆಂದು ನಾಮಕರಣ ಮಾಡಬೇಕು.

  • ಕನ್ನಡ ಭವನ ನಿರ್ಮಾಣಕ್ಕೆ ಶೀಘ್ರ ನಿವೇಶನ ಮಂಜೂರು ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.