
ಯಡ್ರಾಮಿ: ತಾಲ್ಲೂಕಿನಲ್ಲಿ ಸಂಚರಿಸುವ ಕೆಕೆಆರ್‌ಟಿಸಿ ಬಸ್‌ಗಳು ಎಕ್ಸೆಲ್ ಕಟ್ ಆಗಿ ನಿಲ್ಲುವುದು, ಬಸ್ ವಿದ್ಯುತ್ ದೀಪ ಇಲ್ಲದಿರುವುದು, ಬ್ಯಾಟರಿ ವೈರ್‌ಗಳು ಸ್ಥಿತಿ, ತುರ್ತು ಸಂದರ್ಭದಲ್ಲಿ ಹೋಗಲು ಅಳವಡಿಸಿದ ಬಾಗಿಲು ತೆರೆಯದಿರುವುದು ಸೇರಿ ವಿವಿಧ ದೋಷಗಳಿಂದ ಪದೇಪದೇ ಎಲ್ಲೆಂದರಲ್ಲಿ ಬಸ್ ಕೆಟ್ಟು ನಿಲ್ಲುತ್ತಿರುವುದರಿಂದ ಪ್ರಯಾಣಿಕರು ಪರದಾಡಬೇಕಿದೆ.
ಜೇವರ್ಗಿ ಹಾಗೂ ಯಡ್ರಾಮಿ ಸೇರಿ ಡಿಪೊದಲ್ಲಿ ಒಟ್ಟು 80 ಬಸ್‌ಗಳು ಇದ್ದು 325 ಒಟ್ಟು ಸಿಬ್ಬಂದಿ ಇದ್ದಾರೆ. ಇದರಲ್ಲಿ 285 ಕಾಯಂ ಸಿಬ್ಬಂದಿ ಇದ್ದರೆ 40 ಜನ ತಾತ್ಕಾಲಿಕ ಸಿಬ್ಬಂದಿ ಇದ್ದಾರೆ.
ಜೇವರ್ಗಿ ತಾಲ್ಲೂಕಿನಲ್ಲಿ 96 ಗ್ರಾಮಗಳು, ಯಡ್ರಾಮಿ ತಾಲ್ಲೂಕಿನಲ್ಲಿ 164 ಗ್ರಾಮಗಳು ಬರುತ್ತವೆ. ಎರಡು ತಾಲ್ಲೂಕು ಸೇರಿ ಒಟ್ಟು 260 ಗ್ರಾಮಗಳಿಗೆ ಕೇವಲ 80 ಬಸ್ ಮಾತ್ರ ಸಂಚಾರ ಮಾಡಲು ಇದ್ದು, ಇದರಲ್ಲಿ ಸಹ ನಾಲ್ಕು ಬಸ್‌ಗಳು ರಾಜ್ಯದ ವಿವಿಧ ಭಾಗಗಳಿಗೆ ಸಂಚರಿಸುತ್ತವೆ. ಹೀಗಾಗಿ ಇಲ್ಲಿ 73 ಬಸ್ ಮಾತ್ರ ತಾಲ್ಲೂಕಿನಲ್ಲಿ ಸಂಚಾರ ಮಾಡುತ್ತವೆ.
ಇಲ್ಲಿ ಹೆಚ್ಚುವರಿಯಾಗಿ 12 ಬಸ್ ಬೇಕು. 20 ಕಂಡಕ್ಟರ್ ಹಾಗೂ 20 ಚಾಲಕರ ಅಗತ್ಯವಿದೆ. 2024–2025ನೇ ಸಾಲಿನಲ್ಲಿ 18 ಬಸ್ ಹೊಸದಾಗಿ ಸೇರ್ಪಡೆಯಾಗಿದ್ದವು.
ಯಡ್ರಾಮಿ ತಾಲ್ಲೂಕಿನಲ್ಲಿ ದಿನಕ್ಕೆ 80 ಟ್ರಿಪ್ ಬಸ್ ಓಡುತ್ತವೆ. ಪಟ್ಟಣಕ್ಕೆ ತೆರಳುವ ಸಾರ್ವಜನಿಕರು, ಪರೀಕ್ಷೆ ಬರೆಯಲು ಹೋಗುವ ವಿದ್ಯಾರ್ಥಿಗಳು ಹೀಗೆ ತಾಲ್ಲೂಕಿನ ನಾನಾಕಡೆಗೆ ತೆರಳುವವರು ಬಸ್ಸಿಗೆ ಬಂದರೂ, ಬಸ್ಸುಗಳು ಎಲ್ಲಿ ಕೆಟ್ಟು ನಿಲ್ಲುತ್ತವೆ ಎನ್ನುವಂತಹ ಆತಂಕ ಸದಾ ಕಾಡುತ್ತದೆ. ಸಮಯಕ್ಕೆ ಸರಿಯಾಗಿ ಬಸ್ ಹತ್ತಿದರೂ ಸೇರಬೇಕಾದ ಸ್ಥಳಕ್ಕೆ ಸೇರಲು ಸಾಧ್ಯವಾಗುತ್ತಿಲ್ಲ. ಬಸ್‌ಗಳು ನಡು ರಸ್ತೆಯಲ್ಲಿ ಕೆಟ್ಟು ನಿಲ್ಲುವುದರಿಂದ ಸಮಸ್ಯೆ ಎದುರಾಗುತ್ತಿದೆ.
ಶಕ್ತಿ ಯೋಜನೆಯಿಂದ ಬಸ್‌ನಲ್ಲಿ ಮಹಿಳೆಯರೇ ಹೆಚ್ಚಾಗಿ ಇರುವುದರಿಂದ ವಿದ್ಯಾರ್ಥಿಗಳಿಗೆ ಬಸ್ ನಲ್ಲಿ ಜಾಗ ಸಿಗದೆ ಬಾಗಿಲಿನಲ್ಲಿ ನಿಂತು ಸಾಗುವಂತಾಗಿದೆ.
ಜೇವರ್ಗಿ ಘಟಕದಲ್ಲಿ ಬಹುತೇಕ ಬಸ್‌ಗಳು ದುರಸ್ತಿಗೆ ಬಂದರೂ ಹಾಗೆಯೇ ಓಡಿಸಿ ಎಂದು ಹೇಳಿ ಕಳಿಸುತ್ತಾರೆ. ನಾವು ಕೆಟ್ಟು ನಿಂತ ಬಸ್ ದುರಸ್ತಿ ಮಾಡಿಕೊಂಡು ಓಡಿಸುತ್ತೇವೆ ಹೆಸರು ಹೇಳಲಿಚ್ಚಿಸದಚಾಲಕ ನಿರ್ವಾಹಕ
ಜೇವರ್ಗಿ ಡಿಪೊಗೆ ಇನ್ನೂ ಹತ್ತು ಬಸ್ ಅಗತ್ಯವಿದೆ. ಹದಿನೈದು ಕಂಡಕ್ಟರ್ ಹಾಗೂ ಚಾಲಕರು ಬೇಕಿದೆ. ಬಸ್ ದುರಸ್ತಿ ಮಾಡಿಸುತ್ತಿದ್ದೇವೆ. ಇತ್ತೀಚೆಗೆ ಹೊಸ ಬಸ್‌ಗಳು ಸೇರ್ಪಡೆಯಾಗಿದ್ದು ಜೇವರ್ಗಿ–ಯಡ್ರಾಮಿ ಮಧ್ಯೆ ಇನ್ನಷ್ಟು ಬಸ್ ಸಂಚರಿಸಲಿವೆಕೃಷ್ಣಾ ಪವಾರ ಡಿಪೊ ವ್ಯವಸ್ಥಾಪಕ ಜೇವರ್ಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.