ADVERTISEMENT

‘ಯುವನಿಧಿ’ ಅನುಷ್ಠಾನದಲ್ಲಿ ಕಲಬುರಗಿ ದ್ವಿತೀಯ

ಪದವೀಧರರಿಗೆ ₹3 ಸಾವಿರ, ಡಿಪ್ಲೊಮಾ ಪಡೆದವರಿಗೆ ₹1,500 ನಿರುದ್ಯೋಗ ಭತ್ಯೆ ನೀಡುವ ಯೋಜನೆ

ಬಸೀರ ಅಹ್ಮದ್ ನಗಾರಿ
Published 24 ಜುಲೈ 2025, 5:03 IST
Last Updated 24 ಜುಲೈ 2025, 5:03 IST
<div class="paragraphs"><p>ಯುವನಿಧಿ</p></div>

ಯುವನಿಧಿ

   

ಕಲಬುರಗಿ: ದುಡಿಯುವ ಕೈಗಳಿಗೆ ಕೆಲಸವಿಲ್ಲದ ಪದವೀಧರರು ಹಾಗೂ ಡಿಪ್ಲೊಮಾ ಪಡೆದವರಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ಕಲ್ಪಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯುವನಿಧಿ ಯೋಜನೆಯ ಅನುಷ್ಠಾನದಲ್ಲಿ ಕಲಬುರಗಿ ಜಿಲ್ಲೆ ರಾಜ್ಯದಲ್ಲೇ ದ್ವಿತೀಯ ಸ್ಥಾನದಲ್ಲಿದೆ.

2025ರ ಜುಲೈ 23ರ ಲೆಕ್ಕಾಚಾರದಂತೆ 31,894 ಫಲಾನುಭವಿಗಳ ನೋಂದಣಿಯೊಂದಿಗೆ ಬೆಳಗಾವಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದ್ದರೆ, 19,966 ಫಲಾನುಭವಿಗಳ ನೋಂದಣಿಯೊಂದಿಗೆ ಕಲಬುರಗಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. 3ನೇ ಸ್ಥಾನದಲ್ಲಿ ರಾಯಚೂರು (17,757), 4ನೇ ಸ್ಥಾನದಲ್ಲಿ ಬೆಂಗಳೂರು ನಗರ (16,920) ಹಾಗೂ 5ನೇ ಸ್ಥಾನದಲ್ಲಿ ವಿಜಯಪುರ (16,525) ಜಿಲ್ಲೆಗಳಿವೆ.

ADVERTISEMENT

ಕಲಬುರಗಿ ಜಿಲ್ಲೆಯಲ್ಲಿ ಯೋಜನೆಯ ಆರಂಭದಿಂದ 2025ರ ಮೇ ಅಂತ್ಯದವರೆಗೆ ಜಿಲ್ಲೆಯ ನಿರುದ್ಯೋಗಿ ಫಲಾನುಭವಿಗಳಿಗೆ ₹36.93 ಕೋಟಿ ಹಣವನ್ನು ಫಲಾನುಭವಿಗಳ ಖಾತೆಗೆ ನೇರನಗದು ವ್ಯವಸ್ಥೆ ಮೂಲಕ ಪಾವತಿಯಾಗಿದೆ.

ಕಲಬುರಗಿಯಲ್ಲೇ ಹೆಚ್ಚು:

ಜಿಲ್ಲೆಯ ಪೈಕಿ ಈತನಕ ಕಲಬುರಗಿ ತಾಲ್ಲೂಕಿನಲ್ಲೇ ಅತಿಹೆಚ್ಚು ಅಂದರೆ 7,093 ಅರ್ಜಿಗಳು ನಿರುದ್ಯೋಗ ಭತ್ಯೆಗೆ ಸಲ್ಲಿಕೆಯಾಗಿವೆ. ಇನ್ನುಳಿದಂತೆ ಆಳಂದ ತಾಲ್ಲೂಕಿನಲ್ಲಿ 2,240, ಅಫಜಲಪುರ ತಾಲ್ಲೂಕಿನಲ್ಲಿ 2,050, ಜೇವರ್ಗಿ ತಾಲ್ಲೂಕಿನಲ್ಲಿ 2,044, ಚಿತ್ತಾಪುರ ತಾಲ್ಲೂಕಿನಲ್ಲಿ 1,475, ಸೇಡಂ ತಾಲ್ಲೂಕಿನಲ್ಲಿ 1,330, ಚಿಂಚೋಳಿ ತಾಲ್ಲೂಕಿನಲ್ಲಿ 1,153, ಕಮಲಾಪುರ ತಾಲ್ಲೂಕಿನಲ್ಲಿ 840, ಯಡ್ರಾಮಿ ತಾಲ್ಲೂಕಿನಲ್ಲಿ 639, ಕಾಳಗಿ ತಾಲ್ಲೂಕಿನಲ್ಲಿ 556 ಹಾಗೂ ಶಹಾಬಾದ್ 547 ಸೇರಿ ಒಟ್ಟು 19,966 ಅರ್ಜಿಗಳು ರಾಜ್ಯ ಸರ್ಕಾರದ ನಿರುದ್ಯೋಗ ಭತ್ಯೆ ಯೋಜನೆಯಡಿ ಸಲ್ಲಿಕೆಯಾಗಿವೆ.

ಸ್ವೀಕೃತವಾದ ಅರ್ಜಿಗಳ ಪೈಕಿ ಈತನಕ 16,689 ಫಲಾನುಭವಿಗಳಿಗೆ ₹36.93 ಕೋಟಿ ಡಿಬಿಟಿ ಮೂಲಕ ಪಾವತಿಸಲಾಗಿದೆ.

3,277 ಮಂದಿಗೆ ತೊಂದರೆ:

‘ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡ 3,277 ಮಂದಿಗೆ ನಿರುದ್ಯೋಗ ಭತ್ಯೆ ಪಾವತಿಯಲ್ಲಿ ತಾಂತ್ರಿಕ ತೊಂದರೆಗಳಿವೆ. ಅರ್ಜಿದಾರರನ್ನು ತಲುಪಿ ತಾಂತ್ರಿಕ ತೊಂದರೆ ನೀಗಿಸಲು ಒತ್ತು ನೀಡಲಾಗುತ್ತಿದೆ’ ಎಂದು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ನಾಗುಬಾಯಿ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ತಾಲ್ಲೂಕುಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿ ಯುವನಿಧಿ ಯೋಜನೆ ಕುರಿತು ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸಲಾಗುವುದು
ನಾಗುಬಾಯಿ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ

ಯುವನಿಧಿ ಪ್ಲಸ್‌ಗೆ ನಿರುತ್ಸಾಹ!

ನಿರುದ್ಯೋಗ ಭತ್ಯೆ ಪಡೆಯುವ ಯುವಜನರಿಗೆ ಎರಡು ವರ್ಷ ಆರ್ಥಿಕ ನೆರವು ನೀಡುವ ಜೊತೆಗೆ ಆ ಫಲಾನುಭವಿಗಳ ಕೌಶಲವೃದ್ಧಿಗೂ ರಾಜ್ಯ ಸರ್ಕಾರದ ಒತ್ತು ನೀಡಿದೆ. ಆದರೆ ಈ ಉಚಿತ ತರಬೇತಿ ಪಡೆಯಲು ಜಿಲ್ಲೆಯ ನಿರುದ್ಯೋಗಿ ಯುವಜನ ಉತ್ಸಾಹವನ್ನೇ ತೋರುತ್ತಿಲ್ಲ! ‘ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡ ಫಲಾನುಭವಿಗಳಿಗೆ ‘ಯುವನಿಧಿ ಪ್ಲಸ್’ ಯೋಜನೆಯಡಿ 13 ಕೋರ್ಸ್‌ಗಳಿಗೆ ಮೂರು ತಿಂಗಳು ಉಚಿತ ಕೌಶಲ ತರಬೇತಿ ಪಡೆಯಲು ಅವಕಾಶ ನೀಡಲಾಗಿದೆ. ಜಿಟಿಟಿಸಿ ಕೆಜಿಟಿಟಿಐ ಸಿಡಾಕ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಮೂಲಕ ಈ ತರಬೇತಿ ನೀಡಲಾಗುತ್ತಿದೆ. ಈ ತರಬೇತಿ ಪಡೆಯಲು ಎರಡು ಸಾವಿರ ಮಂದಿಗೆ ಫೋನ್‌ ಕರೆ ಮಾಡಿದರೆ 35 ಅಭ್ಯರ್ಥಿಗಳಷ್ಟೇ ಬಂದಿದ್ದಾರೆ. ಅವರಿಗೆ ಕಂಪ್ಯೂಟರ್‌ ಸೇರಿದಂತೆ ಐಒಟಿ ತರಬೇತಿ ನೀಡಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ನಾಗುಬಾಯಿ. ‘ಉಚಿತ ತರಬೇತಿ ಪಡೆದರೆ ನಿರುದ್ಯೋಗ ಭತ್ಯೆ ನಿಂತು ಹೋಗುತ್ತದೆ ಎಂಬ ಭಯ ಫಲಾನುಭವಿಗಳನ್ನು ಕಾಡುತ್ತಿದೆ. ಉಚಿತ ತರಬೇತಿಗೂ ನಿರುದ್ಯೋಗ ಭತ್ಯೆಗೂ ಸಂಬಂಧವೇ ಇಲ್ಲ. ನಿಯಮದಂತೆ ಎರಡು ವರ್ಷಗಳ ಅವಧಿಗೆ ನಿರುದ್ಯೋಗ ಭತ್ಯೆ ಬಂದೇ ಬರುತ್ತದೆ. ಇದೇ ಅವಧಿಯಲ್ಲಿ ಕೌಶಲವೃದ್ಧಿಸಿಕೊಂಡರೆ ಬದುಕಿನಲ್ಲಿ ಮುಂದೆ ಉದ್ಯೋಗ ಪಡೆಯಲು ಸುಲಭವಾಗುತ್ತದೆ’ ಎಂದು ಅವರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.