ADVERTISEMENT

ಅತ್ಯಾಚಾರ ಖಂಡಿಸಿ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2013, 19:59 IST
Last Updated 1 ಜನವರಿ 2013, 19:59 IST
ಗೋಣಿಕೊಪ್ಪಲು ಬಳಿಯ ದೇವರಪುರದಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಪಟ್ಟಣದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು
ಗೋಣಿಕೊಪ್ಪಲು ಬಳಿಯ ದೇವರಪುರದಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಪಟ್ಟಣದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು   

ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ದೇವರಪುರ ಗ್ರಾಮದಲ್ಲಿ ಸೋಮವಾರ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಪಟ್ಟಣದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯ ಮೇಲೆ ತೋಟದ ಮಾಲೀಕ ಇಸ್ಮಾಯಿಲ್ ಹಾಗೂ ಆತನ ಸ್ನೇಹಿತ ಅಬ್ಬಾಸ್ ಎಂಬುವವರು ಅತ್ಯಾಚಾರ ನಡೆಸಿದ್ದಾರೆ. ಇದರೊಂದಿಗೆ ಕೊಡಗು ಜಿಲ್ಲೆಯಲ್ಲಿ ಹಿಂದೂ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬುದು ಸಾಬೀತಾಗಿದೆ. ಈಗಾಗಲೇ ಬಂಧಿಸಿರುವ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.

ಮೊಬೈಲ್ ಅಂಗಡಿಗಳಲ್ಲಿ ಅಶ್ಲೀಲ ಚಿತ್ರ ಪ್ರದರ್ಶಿಸುವುದು ಹಾಗೂ ಕಾಮ ಪ್ರಚೋದಕ ಸಂದೇಶ ಕಳಿಸುವ ಕೃತ್ಯದಲ್ಲಿ ತೊಡಗಿದವರನ್ನು ಬಂಧಿಸಬೇಕು ಎಂದೂ ಒತ್ತಾಯಿಸಿದರು. ಘಟನೆ ಖಂಡಿಸಿ ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಗೋಣಿಕೊಪ್ಪಲು ಬಸ್ ನಿಲ್ದಾಣದವರೆಗೆ ರ‌್ಯಾಲಿ ನಡೆಸಿದ ಪ್ರತಿಭಟನೆಕಾರರು ಕೆಲ ಹೊತ್ತು ರಸ್ತೆತಡೆ ನಡೆಸಿದರು.

ಹಿಂದೂ ಜಾಗರಣಾ ವೇದಿಕೆ ಮುಖಂಡರಾದ ಸುರೇಶ್ ರೈ, ಚೆಕ್ಕೆರ ಮನು, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ರೀನಾ ಪ್ರಕಾಶ್, ವಿರಾಜಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ರಘುನಾಣಯ್ಯ ಮುಖಂಡರಾದ ಗಿರೀಶ್ ಗಣಪತಿ, ಸಿ.ಕೆ. ಬೋಪಣ್ಣ, ಜೀವನ್, ಕಾಯರ ಕಿರಣ್ ಅವರ ನೇತೃತ್ವ ವಹಿಸಿದ್ದರು. ಕಾವೇರಿ ಮತ್ತು ಲಯನ್ಸ್ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಡಿವೈಎಸ್‌ಪಿ ದುಗ್ಗಪ್ಪ, ವೃತ್ತ ನಿರೀಕ್ಷಕ ಶೈಲೇಂದ್ರ, ಪಿಎಸ್‌ಐಗಳಾದ ಸುರೇಶ್‌ಕುಮಾರ್, ಸುಬ್ರಮಣ್ಯ ಹಾಗೂ ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.