ಸೋಮವಾರಪೇಟೆ: ತಾಲೂಕು ಪಂಚಾಯಿತಿಗೆ ಬಿಡುಗಡೆಯಾಗಿರುವ ಸ್ಟ್ಯಾಂಪ್ ಡ್ಯೂಟಿ ಅನುದಾನದ ಹಣವನ್ನು ಅಧ್ಯಕ್ಷರು ತಮಗೆ ಬೇಕಾದವರಿಗೆ ಹಂಚಿಕೆ ಮಾಡಿದ್ದು, ಕೆಲವರಿಗೆ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿ ಕೆಲವು ಸದಸ್ಯರು ಅಧ್ಯಕ್ಷರೊಂದಿಗೆ ವಾಗ್ವಾದ ನಡೆಸಿದರು.
ತಾ.ಪಂ. ಅಧ್ಯಕ್ಷ ವಿ.ಕೆ.ಲೋಕೇಶ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿ ಆರಂಭದಲ್ಲೇ ಸದಸ್ಯ ಅಬ್ದುಲ್ ಲತೀಫ್ ಈ ವಿಚಾರ ಪ್ರಸ್ತಾಪಿಸಿದರು.
ಸ್ಟ್ಯಾಂಪ್ ಡ್ಯೂಟಿ ಅನುದಾನದಲ್ಲಿ ರೂ.11 ಲಕ್ಷ ಬಿಡುಗಡೆಯಾಗಿದ್ದು, ರೂ.3 ಲಕ್ಷವನ್ನು ಅಧ್ಯಕ್ಷರು ಹಾಗೂ ರೂ. 2.50 ಲಕ್ಷವನ್ನು ಉಪಾಧ್ಯಕ್ಷರು ತಮ್ಮ ಕ್ಷೇತ್ರದ ಕಾಮಗಾರಿಗಳಿಗೆ ವಿನಿಯೋಗಿಸಿಕೊಂಡಿದ್ದಾರೆ. ನಾವೇಕೆ ಪಂಚಾಯಿತಿ ಸದಸ್ಯರಾಗಿರುವುದು ಎಂದು ಖಾರವಾಗಿ ಪ್ರಶ್ನಿಸಿದರು.
ಇದರಿಂದ ಕೆರಳಿದ ಅಧ್ಯಕ್ಷರು ಹಿಂದಿನ ಬಾರಿ ನಿಮ್ಮ ಕ್ಷೇತ್ರಕ್ಕೆ ಹಣ ನೀಡಲಾಗಿದೆ, ಮುಂಬರುವ ಅನುದಾನದಲ್ಲಿ ಹೆಚ್ಚಿನ ಹಣವನ್ನು ನಿಮಗೂ ನೀಡಲಾಗುವುದು ಸ್ವಲ್ಪ ಕಾಯಬೇಕು ಎಂದರು. ಆಗ ಸದಸ್ಯರಾದ ಸತೀಶ್ ಹಾಗೂ ಆರೆಯೂರು ಜಯಣ್ಣ ಅಧ್ಯಕ್ಷರ ಪರವಾಗಿ ಮಾತನಾಡಿ, ನಿಮ್ಮ ಕ್ಷೇತ್ರಕ್ಕೆ ಹಿಂದೆಲ್ಲ ಅಧಿಕ ಹಣವನ್ನು ಅಧ್ಯಕ್ಷರು ನೀಡಿದ್ದಾರೆ, ವೃಥಾ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದರು. ಅರ್ಧ ಗಂಟೆಯ ತನಕ ಇದೇ ವಿಚಾರದ ಬಗ್ಗೆ ಚರ್ಚೆ ಮುಂದುವರಿಯಿತು.
ಕುಶಾಲನಗರ ಬಿಸಿಎಂ ಹಾಸ್ಟೆಲ್ ಹಗರಣವನ್ನು ಪ್ರಸ್ತಾಪಿಸಿದ ಸದಸ್ಯ ಲತೀಫ್, ವಾರ್ಡನ್ ವಿರುದ್ಧ ತಾಲೂಕು ಪಂಚಾಯಿತಿಯ ಕ್ರಮದ ಬಗ್ಗೆ ಮಾಹಿತಿ ಕೇಳಿದರು. ಆ ಸಮಯದಲ್ಲಿ ಎದ್ದು ನಿಂತ ಸದಸ್ಯ ಸತೀಶ್ ನಾನು ಅಗಾಗ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅಲ್ಲಿಯ ವಾರ್ಡನ್ ಯಾವುದೇ ತಪ್ಪು ಮಾಡಿಲ್ಲ ಎಂದು ಸಮುಜಾಯಿಷಿ ನೀಡಿದಾಗ ಅವರ ಹಗರಣಗಳ ಬಗೆಗಿನ ದಾಖಲೆಗಳನ್ನು ಈಗ ತರುತ್ತೇನೆ ಎಂದು ಸದಸ್ಯ ಅಬ್ದುಲ್ ಲತೀಫ್ ಹೊರ ನಡೆದರು.
ಬಿಸಿಎಂ ಹಾಸ್ಟೆಲ್ ವಾರ್ಡನ್ ವಿರುದ್ಧ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಂಡಿದ್ದಾರೆ. ಅನಗತ್ಯ ಚರ್ಚೆ ಬೇಡ ಎಂದು ಅಧ್ಯಕ್ಷರು ಹೇಳಿದರು.
ಕುಶಾಲನಗರ ಬಿಸಿಎಂ ಬಾಲಕಿಯರ ಹಾಸ್ಟೆಲ್‌ನಲ್ಲಿ ಹೆಣ್ಣು ಮಕ್ಕಳಿಗೆ ಸ್ನಾನ ಮಾಡುವುದಕ್ಕೂ ನೀರಿಲ್ಲ. ಉಪಾಹಾರಕ್ಕೆ ಮೂರೇ ಮೂರು ಇಡ್ಲಿ ನೀಡಲಾಗುತ್ತಿದೆ. ಶಾಲೆ ಮುಟ್ಟುವಷ್ಟರಲ್ಲಿ ಅವರ ಹೊಟ್ಟೆ ಖಾಲಿಯಾಗಿರುತ್ತದೆ. ಹೀಗಾದರೆ ಮಕ್ಕಳಿಗೆ ವಿದ್ಯೆ ಕಲಿಯಲು ಸಾಧ್ಯವೇ ಎಂದು ಸದಸ್ಯ ಸತೀಶ್ ಪ್ರಶ್ನಿಸಿದರು. ಶೀಘ್ರವೇ ಈ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಅಧ್ಯಕ್ಷರು ಸೂಚಿಸಿದರು.
ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀತಾ ಕಾಲೋನಿಯಲ್ಲಿ ಪರಿಶಿಷ್ಟ ವರ್ಗದವರ 21 ಮನೆಗಳಿವೆ. ಪ್ರಾಣಿಗಳು ಮಾತ್ರ ಆ ಮನೆಗಳಲ್ಲಿ ವಾಸಿಸಬಹುದು. ಮುಂದಿನ ದಿನಗಳಲ್ಲಿ ಸುರಿಯುವ ಮಳೆಯಲ್ಲಿ ಎಲ್ಲ ಮನೆಗಳು ನೆಲಸಮವಾಗುತ್ತವೆ. ಅಲ್ಲಿರುವ ಅಂಗನವಾಡಿಯಲ್ಲಿ ಮೂಲಸೌಕರ್ಯಗಳೇ ಇಲ್ಲ. ಕೂಡಲೇ ಸಮಾಜ ಕಲ್ಯಾಣ ಇಲಾಖೆಯವರು ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಡಿ.ಎಸ್.ಪೊನ್ನಪ್ಪ ಆಗ್ರಹಿಸಿದರು.
ದೊಡ್ಡಮಳ್ತೆ ಗ್ರಾ.ಪಂ. ವ್ಯಾಪ್ತಿಯ ವಳಗುಂದ ಗ್ರಾಮದ ಗಿರಿಜನರ ಹಾಡಿಯ ನಿವಾಸಿಗಳಿಗೆ ಯಾವಾಗ ಕುಡಿಯುವ ನೀರು ಕಲ್ಪಿಸುತ್ತೀರಿ ಎಂದು ಸದಸ್ಯ ಎಚ್.ಆರ್.ಸುರೇಶ್ ಪ್ರಶ್ನಿಸಿದರು. ಎ್ಲ್ಲಲ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೂಡಲೆ ವಿದ್ಯುತ್ ಸಂಪರ್ಕ ಪಡೆದು, ಇನ್ನೊಂದು ತಿಂಗಳ ಒಳಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿ.ಪಂ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರೆಹಮಾನ್ ಭರವಸೆ ನೀಡಿದರು.
ಕೇಂದ್ರ ಸರ್ಕಾರದ ಜನನಿ ಶಿಶು ಸುರಕ್ಷಾ ಯೋಜನೆಯಲ್ಲಿ ಎ್ಲ್ಲಲ ವರ್ಗದ ಗರ್ಭಿಣಿಯರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಎ್ಲ್ಲಲ ರೀತಿಯ ಚಿಕಿತ್ಸೆ ದೊರೆಯಲಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಪ ಆರೋಗ್ಯಾಧಿಕಾರಿ ಪುಟ್ಟಪ್ಪ ತಿಳಿಸಿದರು.
ತಾಲೂಕಿನ ವಿವಿಧ ಇಲಾಖೆಗಳ ಮೂಲಕ ನಡೆಯುವ ಕಾಮಗಾರಿಗಳಿಗೆ, ಸರ್ಕಾರದಿಂದ ಬಿಡುಗಡೆಯಾಗಿರುವ ಹಣದ ಸದ್ಬಳಕೆ ಆಗಬೇಕು. ಒಂದು ರೂಪಾಯಿ ಕೂಡಾ ವಾಪಸ್ ಹೋಗಬಾರದು ಎಂದು ಅಧ್ಯಕ್ಷ ಲೋಕೇಶ್ ಅಧಿಕಾರಿಗಳಿಗೆ ಸೂಚಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ನೇತ್ರಾವತಿ, ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಉಪಸ್ಥಿತರಿದ್ದರು. ಸಭೆಯಲ್ಲಿ ತಾ.ಪಂ. ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.