ADVERTISEMENT

ಆದಿವಾಸಿಗಳಿಂದ ಬೃಹತ್ ಕಲಾ ಜಾಥಾ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 12:20 IST
Last Updated 13 ಅಕ್ಟೋಬರ್ 2011, 12:20 IST

ಕುಶಾಲನಗರ: ಕೊಡಗು ಬುಡಕಟ್ಟು ಕೃಷಿಕರ ಸಂಘ, ರಾಷ್ಟ್ರೀಯ ಆದಿವಾಸಿ ಆಂದೋಲನ, ಕಾರ್ಡ್,  ಲೋಕಶಕ್ತಿ ಅಭಿಯಾನ ಸೇರಿದಂತೆ ದೇಶದ ವಿವಿಧ ಸಮುದಾಯ ಹಕ್ಕುಗಳ ಸಂಘಟನೆಗಳ ಸಂಯುಕ್ತಾ ಶ್ರಯದಲ್ಲಿ ಪಟ್ಟಣದ ಆರ್.ಎಂ.ಸಿ.ಮೈದಾನದಲ್ಲಿ ನಾಲ್ಕು ದಿನ ನಡೆದ ರಾಷ್ಟ್ರೀಯ ಸಮುದಾಯ ಹಕ್ಕುಗಳ ಸಂಗಮ -2011 ಕ್ಕೆ ಬುಧವಾರ ವರ್ಣರಂಜಿತ ತೆರೆ ಬಿದ್ದಿತು.

ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಆದಿವಾಸಿಗಳು ತಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ ಸಾಂಸ್ಕೃತಿಕ ಕಲಾ ವೈಭವದೊಂದಿಗೆ ನಡೆಸಿದ ಬೃಹತ್ ಕಲಾ ಜಾಥಾದಲ್ಲಿ ತಮ್ಮ ಮೂಲ ಭೂತ ಹಕ್ಕೋತ್ತಾಯ ಮಾಡಿದರು.

ಕುಶಾಲನಗರದ ಪ್ರಮುಖ ಬೀದಿಯಲ್ಲಿ ಸಾಗಿದ ಮೆರವಣಿಗೆಯಲ್ಲಿ `ಕಾಡಿನ ಮಕ್ಕಳು ನಾವೇ, ಕಾಡಿನ ರಾಜರು ನಾವೇ,~ `ಕೊಡುವುದಿಲ್ಲ ನಮ್ಮ ಕಾಡು, ಬಿಡುವುದಿಲ್ಲ ನಮ್ಮ ತಾಯಿ ನಾಡು~, `ಭೂಮಿ ನಮ್ಮದು, ಕಾಡು ನಮ್ಮದು, ನೀರು ನಮ್ಮದು~, ಕಾಡು ನಮ್ಮ ಪಿತ್ರಾರ್ಜಿತ ನೆಲೆವೀಡು, ಅರಣ್ಯಕ್ಕೆ ಜೈ, ಆದಿವಾಸಿಗಳ ಹೋರಾಟಕ್ಕೆ ಜೈ... ಇತ್ಯಾದಿ ಘೋಷಣೆ ಕಲಾ ಜಾಥಾದಲ್ಲಿ ಮೊಳಗಿದವು.

ಸಮುದಾಯದ ಸಂಪನ್ಮೂಲಗಳಾದ ಭೂಮಿ, ನೀರು, ಅರಣ್ಯದ ಮೇಲಿನ ಹಕ್ಕುಗಳ ಹೊಣೆಗಾರಿಕೆ ಯನ್ನು ಅರಣ್ಯ ಹಕ್ಕುಗಳ ಕಾಯ್ದೆಯಂತೆ ಆದಿವಾಸಿ ಗಳಿಗೆ ನೀಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ `ಕುಶಾಲನಗರ ಘೋಷಣೆ~ ಎಂಬ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಿ ಸಂಗಮ - 2011 ದಲ್ಲಿ ಒಪ್ಪಿಗೆ ಪಡೆಯಲಾಯಿತು.

ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಅವುಗಳ ಸದ್ಬಳಕೆ ಹಾಗೂ ಇವುಗಳನ್ನು ನಂಬಿ ಜೀವನ ನಡೆಸು ತ್ತಿರುವ ಸಮುದಾಯಗಳ ಜೀವನ ಕ್ರಮದ ಹಕ್ಕುಗಳ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.

ಕಲಾಜಾಥಾದಲ್ಲಿ ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಛತ್ತೀಸ್‌ಗಡ್, ಪಶ್ಚಿಮ ಬಂಗಾಳ, ದೆಹಲಿ, ಜಾರ್ಖಂಡ್, ಪಾಂಡಿಚೇರಿ ಮತ್ತಿತರ ರಾಜ್ಯಗಳಿಂದ ಆಗಮಿಸಿದ್ದ ವಿವಿಧ ಸಮುದಾಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.