ADVERTISEMENT

ಇಂದಿನಿಂದ ಅಡ್ಡೇಂಗಡ ಕಪ್ ಕ್ರಿಕೆಟ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 8:27 IST
Last Updated 22 ಏಪ್ರಿಲ್ 2013, 8:27 IST

ಗೋಣಿಕೊಪ್ಪಲು: `ಅಡ್ಡೇಂಗಡ ಕಪ್' ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವಕ್ಕೆ ಏ. 22ರಂದು ಚಾಲನೆ ದೊರೆಯಲಿದೆ. ಬಾಳೆಲೆಯ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಸೋಮವಾರದಿಂದ 25 ದಿನಗಳ ಕಾಲ ನಡೆಯಲಿರುವ ಉತ್ಸವಕ್ಕೆ ಭಾರತ ಹಾಕಿ ತಂಡ ಮಾಜಿ ಆಟಗಾರ ಅಂಜಪರವಂಡ ಬಿ. ಸುಬ್ಬಯ್ಯ ಬೆಳಿಗ್ಗೆ 10 ಗಂಟೆಗೆ ಚಾಲನೆ ನೀಡಲಿದ್ದಾರೆ.

ಭಾರತದ ಕ್ರಿಕೆಟ್ ತಂಡದ ಆಟಗಾರ ರಾಬಿನ್ ಉತ್ತಪ್ಪ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕೊಡಗು ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕಾರ್ಸನ್ ಕಾರ್ಯಪ್ಪ, ಕಾಫಿ ಬೆಳೆಗಾರರಾದ ಅಳೆಮೇಂಗಡ ಪೊನ್ನಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಆದೇಂಗಡ ಉತ್ತಪ್ಪ, ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ಎಪಿಸಿಎಂಎಸ್ ಅಧ್ಯಕ್ಷ ಅಳೆಮೇಂಗಡ ಬೋಸ್ ಮಂದಣ್ಣ, ಪ್ರಾಂಶುಪಾಲ ಶ್ರೀಮೂರ್ತಿ ಪಾಲ್ಗೊಳ್ಳಲಿದ್ದಾರೆ. ಟೂರ್ನಿ ಅಧ್ಯಕ್ಷ ಅಡ್ಡೇಂಗಡ ಜಿ.ಬೋಪಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಳಿಗ್ಗೆ 7 ಗಂಟೆಗೆ ಅಡ್ಡೇಂಗಡ ಕುಟುಂಬದ ಸದಸ್ಯರು ನಾರಮುನೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಬಾಳೆಲೆಯ ಮುಖ್ಯ ರಸ್ತೆಯಲ್ಲಿ ಮಂಗಳ ವಾದ್ಯದೊಂದಿಗೆ ಮೆರವಣಿಗೆ ನಡೆಸಿ ಮೈದಾನಕ್ಕೆ ಆಗಮಿಸಲಿದ್ದಾರೆ. ಮೈದಾನದಲ್ಲಿ  ಬೊಳಕಾಟ್, ಕೋಲಾಟ್, ಉಮ್ಮತ್ತಾಟ್ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ಉದ್ಘಾಟನೆಯ ಬಳಿಕ ಪ್ರದರ್ಶನ ಪಂದ್ಯ ನಡೆಯಲಿದೆ. ಮಧ್ಯಾಹ್ನದ ನಂತರ ಟೂರ್ನಿಯ ಪಂದ್ಯಗಳು ಜರುಗಲಿವೆ. ಟೂರ್ನಿಯ ಫೈನಲ್ ಪಂದ್ಯ ಮೇ 25ರಂದು ನಡೆಯಲಿದೆ  ಎಂದು ಆಯೋಜಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.