ADVERTISEMENT

ಎಂಜಿನಿಯರಿಂಗ್ ಕಾಲೇಜಿನಲ್ಲಿ ಕ್ರೀಡೋತ್ಸವ

ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ಭಾಗವಹಿಸುವಂತೆ ಕರೆ

​ಪ್ರಜಾವಾಣಿ ವಾರ್ತೆ
Published 19 ಮೇ 2018, 12:16 IST
Last Updated 19 ಮೇ 2018, 12:16 IST

ಕುಶಾಲನಗರ: ‘ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡಾ ಚಟುವಟಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸರ್ವತೋಮುಖ ಅಭಿವೃದ್ಧಿ ಹೊಂದಬೇಕು’ ಎಂದು ಮಾದಾಪಟ್ಟಣ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶ್ ದೊಡ್ಡಬೆಮ್ಮತ್ತಿ ಸಲಹೆ ನೀಡಿದರು.

ಸಮೀಪದ ಮಾದಾಪಟ್ಟಣ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ತಾಂತ್ರಿಕ ಶಿಕ್ಷಣವನ್ನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಲ್ಲಿ ಅನೇಕ ಮಂದಿ ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿ ಕ್ರೀರ್ತಿ ತಂದಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಕ್ರೀಡೆಯನ್ನು ನಿರ್ಲಕ್ಷ್ಯ ಮಾಡದೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು’ ಎಂದು ಹೇಳಿದರು.

ADVERTISEMENT

ಕಾಲೇಜಿನ ರಿಜಿಸ್ಟರ್ ಲಿಂಗರಾಜು ಮಾತನಾಡಿ, ‘ವಿದ್ಯಾರ್ಥಿಗಳಿಗೆ ಓದಿನ ಒತ್ತಡದಿಂದ ಹೊರಬರಲು ಕ್ರೀಡೋತ್ಸವವನ್ನು ಏರ್ಪಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಒತ್ತಡ ಕಡಿಮೆಯಾಗಿ, ಉತ್ಸಾಹಭರಿತರಾಗುತ್ತಾರೆ. ಓದಿನ ಜೊತೆ ಕ್ರೀಡೆಯೂ ಇರಬೇಕು. ಇದರಿಂದ ಅವರಲ್ಲಿ ಮನೋಬಲ ಹೆಚ್ಚಾಗಲಿದೆ’ ಎಂದರು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಸಾದ್ ಸಾಲಿಯಾನ್ ಮಾತನಾಡಿ, ‘ವಿದ್ಯಾರ್ಥಿಗಳು ಓದಿನ ಜೊತೆ ಕ್ರೀಡೆಯಲ್ಲಿಯೂ ಹೆಚ್ಚು ಆಸಕ್ತಿ ವಹಿಸಬೇಕು. ಕ್ರೀಡೆಯಲ್ಲಿ ಉತ್ತಮ ಭವಿಷ್ಯವಿದೆ. ಅವರು ಕ್ರೀಡೆಯಲ್ಲಿ ಆಸಕ್ತಿ ತೋರುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲಿದ್ದಾರೆ’ ಎಂದರು.

ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಬ್ಬಡ್ಡಿ, ವಾಲಿಬಾಲ್, ಥ್ರೋಬಾಲ್, ಕ್ರಿಕೆಟ್, ಚೆಸ್ ಮತ್ತು ಕೇರಂ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ಕಾಲೇಜಿನ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಇಸಿ ವಿಭಾಗದಿಂದ ತಲಾ ಒಂದೊಂದು ತಂಡಗಳು ಭಾಗವಹಿಸಿದ್ದವು. ವಿದ್ಯಾರ್ಥಿಗಳು ಉತ್ಸಾಹದಿಂದ ಕ್ರೀಡೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.