ADVERTISEMENT

ಎಸ್‌ಡಿಎಂಸಿ ವಜಾಕ್ಕೆ ಪಾಲಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 7:52 IST
Last Updated 27 ಡಿಸೆಂಬರ್ 2012, 7:52 IST

ಶನಿವಾರಸಂತೆ: ಗೋಪಾಲಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ಹಾಗೂ ಮುಖ್ಯಶಿಕ್ಷಕರ ಬೇಜವಾಬ್ದಾರಿತನದಿಂದ ಕೊಠಡಿಗಳ ಬಾಗಿಲು ತೆರೆಯದೇ, ವಿದ್ಯಾರ್ಥಿಗಳು ಶಾಲಾ ಆವರಣದ್ಲ್ಲಲೇ ಕುಳಿತು ಪಾಠ ಕೇಳಬೇಕಾದ ಘಟನೆಗೆ ಬುಧವಾರ ಪೋಷಕರು ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ಸಮೀಪದ ಗೋಪಾಲಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷೆ ಹಾಗೂ ಮುಖ್ಯಶಿಕ್ಷಕರ ಬೇಜವಾಬ್ದಾರಿಯಿಂದಾಗಿ ಸೋಮವಾರ ಶಾಲೆ ಮಕ್ಕಳು ಆವರಣದ್ಲ್ಲಲೇ ಕುಳಿತು ಪಾಠ ಕೇಳಿದ ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬುಧವಾರ ನಡೆದ ಎಸ್‌ಡಿಎಂಸಿ, ಪೋಷಕರ ಹಾಗೂ ಶಿಕ್ಷಕರ ತುರ್ತು ಸಭೆಯಲ್ಲಿ ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಶಾಲಾಭಿವೃದ್ಧಿ ಸಮಿತಿಯು ಶಾಲೆಯ ಆಗುಹೋಗುಗಳಿಗೆ ಸ್ಪಂದಿಸುವುದೇ ಇಲ್ಲ. ಸಮಿತಿಯ 9 ಜನ ಸದಸ್ಯರಲ್ಲಿ ಅಧ್ಯಕ್ಷ ಟಿ.ರಾಮ ಹಾಗೂ ಉಪಾಧ್ಯಕ್ಷೆ ಮೈಮೂನಾ ಸೇರಿದಂತೆ ನಾಲ್ಕು ಜನ ಸದಸ್ಯರು ಯಾವಾಗಲೂ ಸಭೆಗಳಿಗೆ ಗೈರಾಗುತ್ತಾರೆ. ಕೇವಲ ಮೂವರು ಸದಸ್ಯರು ಮಾತ್ರ ಹಾಜರಾಗುತ್ತಾರೆ. ಇಂಥ ಶಾಲಾಭಿವೃದ್ಧಿ ಸಮಿತಿ ಬೇಕಾಗಿಲ್ಲ. ಈ ಸಮಿತಿ ವಜಾಗೊಳಿಸಿ ತಕ್ಷಣ ತುರ್ತು ಸಭೆ ಕರೆದು ನೂತನ ಸಮಿತಿ ರಚಿಸಬೇಕು ಎಂದು ಪಾಲಕರು ಒತ್ತಾಯಿಸಿದರು.

ಶಾಲಾ ಕೊಠಡಿಗಳ ಬಾಗಿಲು ತೆರೆಯದೇ ಬೇಜವಾಬ್ದಾರಿತನ ತೋರಿದ ಮುಖ್ಯಶಿಕ್ಷಕರು ಕ್ಷಮೆ ಕೇಳಬೇಕು ಎಂದು ಪಾಲಕರು ಹಾಗೂ ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದರು.

ಪಾಲಕರ ಆಗ್ರಹಕ್ಕೆ ಮಣಿದ ಮುಖ್ಯಶಿಕ್ಷಕ ಎಸ್.ವಿ.ಧರ್ಮಪ್ಪ ಸಭೆಯಲ್ಲೇ ಕ್ಷಮೆ ಕೋರಿ ಮುಂದೆ ಇಂತಹ ತಪ್ಪು ನಡೆಯದಂತೆ ಎಚ್ಚರವಹಿಸುವುದಾಗಿ ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಮಂಜುಳಾಮಣಿ ಮಾತನಾಡಿ, ನೂತನ ಶಾಲಾಭಿವೃದ್ಧಿ ಸಮಿತಿ ರಚಿಸುವ ಬಗ್ಗೆ ಹಾಗೂ ತುರ್ತು ಸಭೆಯಲ್ಲಿ ನಡೆದ ಪೋಷಕರ ಹಾಗೂ ಗ್ರಾಮಸ್ಥರ ಚರ್ಚೆಯ ವಿವರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರದಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ತಾಲ್ಲೂಕು ಶಿಕ್ಷಕರ ಸಂಘದ ನಿರ್ದೇಶಕ ಎಸ್.ಎಚ್.ಚೇತನ್ ಸಭೆಯಲ್ಲಿ ಉಪಸ್ಥಿತರಿದ್ದರು.

ಎಸ್‌ಡಿಎಂಸಿ ಸದಸ್ಯರಾದ ವಿ.ಎಂ.ರಮೇಶ್, ಪ್ರಕಾಶ್, ಜಿ.ರಮೇಶ್, ಗ್ರಾಮ ಪ್ರಮುಖರಾದ ಜಿ.ವಿ.ರಾಜಶೇಖರ್, ವಸಂತ್, ಪೊನ್ನಪ್ಪ, ಅಶೋಕ್, ಯೋಗೇಶ್, ಗಣೇಶ್, ವೆಂಕಟೇಶ್, ಮಂಜುನಾಥ್, ಸುರೇಶ್, ಧರ್ಮ, ಯೋಗೀಶ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.