ಮಡಿಕೇರಿ:‘ಕುಂದಾ ನಗರಿ’ ಬೆಳಗಾವಿಯಲ್ಲಿ ಮಾರ್ಚ್ 11ರಿಂದ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಕಾವೇರಿ ತವರು ಜಿಲ್ಲೆ ಕೊಡಗಿನಿಂದ ಹಮ್ಮಿಕೊಂಡಿರುವ ‘ಕನ್ನಡ ತೇರು’ ಯಾನ ಕಾರ್ಯಕ್ರಮಕ್ಕೆ ಪುಣ್ಯ ಕ್ಷೇತ್ರ ಭಾಗಮಂಡಲದಲ್ಲಿ ಭಾನುವಾರ ಅದ್ದೂರಿ ಚಾಲನೆ ನೀಡಲಾಯಿತು.ಪೂಜಾ ಕುಣಿತ, ಪಠದ ಕುಣಿತ, ನಂದಿ ಧ್ವಜ ಕುಣಿತ, ಡೊಳ್ಳು ಕುಣಿತ, ಪೊಲೀಸ್, ಶಾಲಾ ಮಕ್ಕಳ ಬ್ಯಾಂಡ್, ಕೊಡವರ ಸಾಂಪ್ರದಾಯಿಕ ಕೋಲಾಟ, ಉಮ್ಮತ್ತಾಟ್, ಕಾಪಾಳ ಕಲಾವಿದರ ಪ್ರದರ್ಶನದೊಂದಿಗೆ ಅಲಂಕೃತ ‘ಕನ್ನಡದ ತೇರು’ ಮಾರುಕಟ್ಟೆ ಆವರಣದಿಂದ ಹೊರಟಿತು. ಕಲಶ ಹೊತ್ತ ಸುಮಂಗಲಿಯರು ರಥದ ಮುಂಭಾಗದಲ್ಲಿ ಸಾಗಿದರೆ, ಕಲಾ ತಂಡಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ತೇರಿನೊಂದಿಗೆ ಹೆಜ್ಜೆ ಹಾಕಿದರು.
ಈ ಕಾರ್ಯಕ್ರಮದ ಅಂಗವಾಗಿ ಭಾಗಮಂಡಲದಲ್ಲಿ ಭಾನುವಾರ ಕನ್ನಡ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಆಟೋ, ವಾಹನ, ಕಟ್ಟಡಗಳ ಮೇಲೆ ಕನ್ನಡದ ಬಾವುಟಗಳು ರಾರಾಜಿಸಿದವು. ಮುಖ್ಯ ರಸ್ತೆಯಲ್ಲಿ ಕನ್ನಡದ ತೇರು ಸಾಗಿದಾಗ ರಸ್ತೆಯ ಇಕ್ಕೆಲಗಳಲ್ಲಿ ನಿಂತ ಸಾರ್ವಜನಿಕರು ಭವ್ಯ ಸ್ವಾಗತ ಕೋರಿದರು. ಕಲಾ ತಂಡಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗು ನೀಡಿದವು.
ಇದಕ್ಕೂ ಮುನ್ನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ.ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ‘ಜಿಲ್ಲೆಯ ಗಡಿ ಭಾಗಗಳಲ್ಲಿ ಕನ್ನಡದ ಬೆಳವಣಿಗೆ ಸಾಕಷ್ಟು ಆಗಬೇಕಿದೆ. ಮಾನಂದವಾಡಿ, ಕುಟ್ಟ, ಕರಿಕೆ ಭಾಗಗಳಲ್ಲಿ ಕನ್ನಡಿಗರು ಕೂಡ ಮಲೆಯಾಳಂ ಭಾಷೆಯನ್ನು ಅನುಕರಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ವಿಷಾದಿಸಿದರು.
‘ಕನ್ನಡ ನಾಡಿನಲ್ಲಿ ನಮ್ಮ ಗಾಳಿ, ನೀರು ಕುಡಿದವರು ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಬೇರೆ ಭಾಷೆಗಳ ಅನುಕರಣೆ ಸರಿಯಲ್ಲ. ನಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿಯಬೇಕು. ಗಡಿ ಭಾಗದಲ್ಲಿ ಕನ್ನಡ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನ ಯಶಸ್ವಿಯಾಗಲಿ’ ಎಂದು ಹಾರೈಸಿದರು.
ಜೂನ್‌ನಿಂದ ಮೊರಾರ್ಜಿ ವಸತಿ ಶಾಲೆ ಪ್ರಾರಂಭ: ಸ್ಥಳೀಯ ಜಿ.ಪಂ. ಸದಸ್ಯ ಎಸ್.ಎನ್.ರಾಜಾರಾವ್ ಮಾತನಾಡಿ, ಎಲ್ಲ ವರ್ಗದ ಜನರ ಮಕ್ಕಳ ಅನುಕೂಲಕ್ಕಾಗಿ ಭಾಗಮಂಡಲದಲ್ಲಿ ಜೂನ್‌ನಿಂದ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಸರ್ಕಾರ ಪ್ರಾರಂಭಿಸಲಿದೆ ಎಂದು ಪ್ರಕಟಿಸಿದರು.
‘ಇಂಗ್ಲಿಷ್ ಕಲಿಕೆ ಅನಿವಾರ್ಯ. ಆದರೆ, ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಬೇಕು. ಗಡಿ ಭಾಗಗಳಲ್ಲಿ ಕನ್ನಡದ ಕಂಪು ಪಸರಿಸಲು ಕಾಸರಗೋಡು, ಬಳ್ಳಾರಿಯಂತಹ ಗಡಿ ಭಾಗಗಳಲ್ಲಿಯೂ ವಿಶ್ವ ಕನ್ನಡದಂತಹ ಸಮ್ಮೇಳನಗಳು ನಡೆಯುವಂತಾಗಬೇಕು’ ಎಂದು ಆಶಿಸಿದರು.ಮಡಿಕೇರಿ ತಾ.ಪಂ. ಅಧ್ಯಕ್ಷೆ ಕವಿತಾ ಪ್ರಭಾಕರ್ ಮಾತನಾಡಿ, ‘ಗಡಿ ಭಾಗಗಳಲ್ಲಿ ಇಂದು ಕನ್ನಡ ಮರೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕನ್ನಡದ ಕಂಪು ಮಾಯವಾಗುತ್ತಿದೆ. ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿದೆ. ಹೀಗಾಗಿ, ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇಂಗ್ಲಿಷ್ ಕಲಿಯಬೇಕು. ಆದರೆ, ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯ ದಕ್ಕಬೇಕು’ ಎಂದು ಪ್ರತಿಪಾದಿಸಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ಪಿ. ರಮೇಶ್, ಕೋಟಿ ಜನರ ಅನ್ನದಾತೆ, ಪುಣ್ಯದಾಯಿನಿ ಕಾವೇರಿ ನದಿ ಹುಟ್ಟಿದಂತಹ ಜಾಗದಿಂದ ಹೊರಡುತ್ತಿರುವ ಕನ್ನಡ ತೇರನ್ನು ಜಿಲ್ಲೆಯ ಜನತೆ ಅದ್ದೂರಿಯಾಗಿ ಸ್ವಾಗತಿಸಿ, ಬೀಳ್ಕೊಡಬೇಕು ಎಂದು ಕೋರಿದರು.ಜಿಲ್ಲಾಧಿಕಾರಿ ಕೆ.ಎಚ್. ಅಶ್ವತ್ಥನಾರಾಯಣಗೌಡ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಕೃಷ್ಣಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಕೆ. ಅಣ್ಣಿಗೇರಿ, ತಹಶೀಲ್ದಾರ್ ಸೌಮ್ಯಗೌಡ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ರಾಣಿ ಮಾಚಯ್ಯ, ತಾ.ಪಂ. ಇಒ ಪುಟ್ಟಸ್ವಾಮಿ, ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ಟಿ. ಬೇಬಿಮ್ಯಾಥ್ಯೂ ಇದ್ದರು.
ಭಾಗಮಂಡಲ ಶಾಲೆ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಶ್ವೇತಾ ರವೀಂದ್ರ, ಭಾರತಿ ರಮೇಶ್ ಮತ್ತು ತಂಡದವರು ನಾಡಗೀತೆ ಹಾಡಿದರು. ಬಸವರಾಜು ಮತ್ತು ತಂಡದವರು ರೈತ ಗೀತೆ ಹಾಡಿದರು. ಉಪ ವಿಭಾಗಾಧಿಕಾರಿ ಡಾ.ಎಂ.ಆರ್. ರವಿ ಸ್ವಾಗತಿಸಿದರು. ಶಿಕ್ಷಕ ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವಿನೋದ್‌ಚಂದ್ರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.