ಕುಶಾಲನಗರ: ಕಳೆದ 4 ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದ ಸೋನೆ ಮಳೆ ಸುಂಟಿಕೊಪ್ಪದಲ್ಲಿ ಮುಂದುವರಿದಿದ್ದು ಬುಧವಾರವೂ ಸುರಿಯಿತು. ಉಳಿದೆಡೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದ ದೃಶ್ಯ ಕಂಡು ಬಂತು.
ಕೆಲ ಸಮಯ ತುಂತುರು ಮಳೆ ಸುರಿದರೆ ಮತ್ತೆ ಕೆಲ ಸಮಯ ರಭಸವಾಗಿ ಸುರಿಯಿತು. ಹೀಗಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲಿ ಕೊಡೆಹಿಡಿದು ಶಾಲೆಗೆ ತೆರಳಿದರು.
ಇನ್ನು ಬೀದಿ ಬದಿ ವ್ಯಾಪಾರಸ್ಥರು ಕೂಡ ಮಳೆಯಲ್ಲಿಯೇ ಕೊಡೆ ಹಿಡಿದು ವ್ಯಾಪಾರ ಮಾಡುತ್ತಿದ್ದ ದೃಶ್ಯ ಕೂಡ ಕಂಡು ಬಂತು. ಆದರೆ ಕಳೆದ 2 ದಿನಗಳಿಂದ ಕುಶಾಲನಗರ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿತ್ತಾದರೂ ಬುಧವಾರ ಮಳೆ ಪ್ರಮಾಣ ಕ್ಷೀಣಿಸಿದೆ. ಕುಶಾಲನಗರ, ಹಾರಂಗಿ, ಹೆಬ್ಬಾಲೆ, ಕೂಡಿಗೆ, ಏಳನೆ ಹೊಸಕೋಟೆ ಪ್ರದೇಶಗಳಲ್ಲಿ ಬುಧವಾರ ತುಂತುರು ಮಳೆಯಾಯಿತು.
ಸಾಧಾರಣ ಮಳೆ
ಶನಿವಾರಸಂತೆ: ಶನಿವಾರಸಂತೆ ಹೋಬಳಿಯಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದೆ. ಪಟ್ಟಣವೂ ಸೇರಿದಂತೆ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಯಳ್ಳಿ, ಗಂಗನಹಳ್ಳಿ ಇತರ ಗ್ರಾಮಗಳಲ್ಲಿ ಅರ್ಧ ಇಂಚು ಮಳೆಯಾಗಿದೆ.
ಶನಿವಾರಸಂತೆ ಹೋಬಳಿಯಲ್ಲಿ ವರ್ಷ ಆರಂಭದಿಂದ ಜೂನ್ 12ರವರೆಗೆ 8 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 18 ಇಂಚು ಮಳೆಯಾಗಿತ್ತು. ಕೊಡ್ಲಿಪೇಟೆ ಹೋಬಳಿಗೆ ಈ ವರ್ಷ ಉತ್ತಮವಾಗಿ ಮಳೆಯಾಗುತ್ತಿದೆ.
`ಈ ವರ್ಷ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ. ಬಿಡದೇ ಗಟ್ಟಿಮಳೆಯಾಗಿ ತೋಡಿನಲ್ಲಿ ನೀರು ಸಂಗ್ರಹವಾದರೆ ಮಾತ್ರ ಬತ್ತದ ವ್ಯವಸಾಯ ಆರಂಭಿಸಬಹುದು. ಗದ್ದೆಗಳಲ್ಲಿ ನೀರಾಗದ ಕಾರಣ ನೀರು ಅಗೆ ಹಾಕಲಾಗಿಲ್ಲ. ಸಸಿಮಡಿ ಕೂಡ ಸಿದ್ಧವಾಗಿಲ್ಲ. ಈ ಮಳೆ ನೀರು ಸಾಕಾಗುವುದಿಲ್ಲ ಎನ್ನುತ್ತಾರೆ' ತೋಯಳ್ಳಿ ಗ್ರಾಮದ ಕೃಷಿಕ ಟಿ.ಆರ್.ಸುರೇಶ್.
ಕೆಲವೆಡೆ ಕಾಫಿ ತೋಟಗಳಲ್ಲಿ ಗೊಬ್ಬರ ಹಾಕಲು ಮಳೆ ಸಾಕಾಗುವುದಿಲ್ಲ. ಗೊಬ್ಬರ ಹಾಕಿದ ನಂತರ ಸ್ಪ್ರೇ ಮಾಡಬೇಕಾಗುತ್ತದೆ. ಹಾಗಾಗಿ, ಕಾಫಿ ಬೆಳೆಗಾರರು ಹೆಚ್ಚು ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.