ADVERTISEMENT

ಕೃಷಿ ಭೂಮಿ ರಕ್ಷಣೆಗೆ ಬದ್ಧ: ಮಣಿ ಉತ್ತಪ್ಪ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 9:01 IST
Last Updated 9 ಡಿಸೆಂಬರ್ 2013, 9:01 IST

ನಾಪೋಕ್ಲು: ಕೃಷಿ ಭೂಮಿಯ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಜಿಲ್ಲೆಯ ಎಲ್ಲಾ ರೈತರು ಮತ್ತು ಜನಪ್ರತಿನಿಧಿಗಳು ಒಗ್ಗೂಡಿ ಹೋರಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಲ್ಲಾರಂಡ ಮಣಿ ಉತ್ತಪ್ಪ ಹೇಳಿದರು.

ಹಾಕತ್ತೂರಿನ ಬಿದ್ದಂಡ ದುಲೀಪ್ ನಂಜಪ್ಪ ಅವರ ನಾಟಿ ಯಂತ್ರದ ಮೂಲಕ ಭತ್ತದ ನಾಟಿ ಮಾಡಲಾದ ಜಮೀನಿನ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆಯ ವತಿಯಿಂದ 2013–- 14ನೇ ಸಾಲಿನ ಆತ್ಮ ಯೋಜನೆಯಡಿ ಆಯೋಜಿಸಲಾದ ಭತ್ತದ ಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೃಷಿ ಭೂಮಿಯನ್ನು ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡುವ ವ್ಯವಸ್ಥೆಯನ್ನು ತಡೆಗಟ್ಟಬೇಕು. ಜಿಲ್ಲೆಯ ಅಳಿವು ಉಳಿವಿನ ಪ್ರಶ್ನೆ ಅಡಗಿದೆ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆ ಅಲ್ಲಾರಂಡ ಬೀನಾ ಬೊಳ್ಳಮ್ಮ ಮಾತನಾಡಿ, ಸವಲತ್ತುಗಳು ಹೆಚ್ಚಾದಾಗ ಜನರು ಸ್ವಾರ್ಥಿ ಹಾಗೂ ಸೋಮಾರಿಗಳಾಗುತ್ತಾರೆ. ಇಂದು ನಾವು ಭೂಮಿಯನ್ನು ಕಾಪಾಡಿಕೊಂಡರೆ, ನಮ್ಮ ಮಕ್ಕಳನ್ನು ಕಾಪಾಡಿಕೊಂಡಂತಾಗುತ್ತದೆ ಎಂದರು.

ಬೆಳೆಗಾರ ಬಿದ್ದಂಡ ದುಲೀಪ್ ನಂಜಪ್ಪ ಮಾತನಾಡಿ, ಯಂತ್ರಗಳ ಮೂಲಕ ಕೃಷಿ ಕೈಗೊಂಡಾಗ ಸಮಯ ಉಳಿಸುವುದರೊಂದಿಗೆ ಇಳುವರಿ ಜಾಸ್ತಿಯಾಗುತ್ತದೆ. ಇಲಾಖೆ ಉತ್ಪಾದನೆ ಪ್ರೋತ್ಸಾಹ ನೀಡಿದಂತೆ ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಕೂಡ ಮಾಡಿಕೊಡಬೇಕಾಗಿದೆ ಎಂದು ಹೇಳಿದರು.

ಪ್ರಗತಿಪರ ರೈತ ತೇಜಸ್ ನಾಣಯ್ಯ, ನಿವೃತ್ತ ಕೃಷಿ ಅಧೀಕ್ಷಕ ಶಿವಾನಂದ್, ಡಾ.ಎಚ್. ರವೀಂದ್ರ ಮಾತನಾಡಿದರು. ಹಾಕತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಯು. ಹನೀಫ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯ ಮಂಞಿರ ಸಾಬು ತಿಮ್ಮಯ್ಯ, ಮಡಿಕೇರಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಪಿ.ಜಿ. ಶಂಭು ಮುತ್ತಪ್ಪ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ವಿ. ಸದಾಶಿವ, ಮಡಿಕೇರಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಮಹಾದೇವ್, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಅಜ್ಜಿಕುಟ್ಟಿರ ಗಿರೀಶ್ ಹಾಜರಿದ್ದರು. ವಿದ್ಯಾರ್ಥಿನಿ ಬಬಿತಾ ಪ್ರಾರ್ಥಿಸಿದರು. ಮಹಾದೇವ್ ಸ್ವಾಗತಿಸಿದರು. ವಿ. ಸದಾಶಿವ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಜ್ಜಿಕುಟ್ಟಿರ ಗಿರೀಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.