ADVERTISEMENT

ಕೈಲು ಮುಹೂರ್ತ: ರಂಜಿಸಿದ ಹಗ್ಗ ಜಗ್ಗಾಟ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 7:50 IST
Last Updated 2 ಅಕ್ಟೋಬರ್ 2012, 7:50 IST

ನಾಪೋಕ್ಲು: ಸಂಸ್ಕೃತಿ ಮತ್ತು ಪರಂಪರೆ ಬಿಂಬಿಸುವ ವಿವಿಧ ಕ್ರೀಡಾಕೂಟಗಳನ್ನು ಏರ್ಪಡಿಸುವ ಮೂಲಕ ಕೊಡಗು ಜಿಲ್ಲೆಯು ರಾಜ್ಯದ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಹೇಳಿದರು.
 
ಕೈಲು ಮುಹೂರ್ತ ಹಬ್ಬದ ಪ್ರಯುಕ್ತ ಸಮೀಪದ ಚೇರಂಬಾಣೆಯ ಬೇಂಗೂರು ಗ್ರಾಮದಲ್ಲಿ ಎ.ಬಿ.ವಿ. ಸ್ವಸಹಾಯ ಸಂಘದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ಆರನೇ ವರ್ಷದ ಕೈಲು ಮುಹೂರ್ತ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು. 50 ವರ್ಷ ವೈವಾಹಿಕ ಜೀವನ ಪೂರೈಸಿದ ದಂಪತಿಗಳನ್ನು ಸನ್ಮಾನಿಸಿದ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಹಿರಿಯರನ್ನು ಗೌರವಿಸುವ ವಿಶಿಷ್ಟ ಸಂಸ್ಕೃತಿ ಕೊಡಗಿನಲ್ಲಿದೆ. ಯುವ ಪೀಳಿಗೆ ಈ ಪರಂಪರೆ ಮುಂದುವರಿಸಬೇಕು ಎಂದರು.

ಹಬ್ಬದ ಅಂಗವಾಗಿ ವೈವಿಧ್ಯಮಯ ಕ್ರೀಡಾ ಸ್ಪರ್ಧೆಗಳು ಜರುಗಿದವು. ಹಗ್ಗಜಗ್ಗಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವುದು. ಕಪ್ಪೆ ಕುಪ್ಪಳಿಸುವಿಕೆ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು.

ಕಾವೇರಿ ಮಿನಿ ಮ್ಯಾರಥಾನ್ ಸ್ಪರ್ಧೆ ಚೆಟ್ಟಿಮಾನಿ ಗ್ರಾಮದ ಕೊಟ್ಟೂರುವಿನಿಂದ 23ಕಿ.ಮೀ. ಅಂತರದ ದೂರದ ತಟ್ಟಂಡಬಾಣೆ ಆಟದ ಮೈದಾನದವರೆಗೆ ಜರುಗಿತು. ವೈವಾಹಿಕ ಜೀವನದ 50 ವರ್ಷ ಪೂರೈಸಿದ ದಂಪತಿಗಳನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ಪಟ್ಟಮಾಡ ಪಿ.ದೇವಯ್ಯ ಹಾಗೂ ಗಂಗಮ್ಮ ಬಸಪ್ಪ ಅವರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.

ಎ.ಬಿ.ವಿ. ಸ್ವಸಹಾಯ ಸಂಘದ ಅಧ್ಯಕ್ಷ ಪೊನ್ನಚೆಟ್ಟೀರ ಪಾಪಣ್ಣ, ಮಧುಬೋಪಣ್ಣ, ಜಿಲ್ಲಾ ಪಂಚಾಯತಿ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷೆ ಬಬ್ಬೀರ ಸರಸ್ವತಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಕುಟ್ಟಂಡ ಅನಿತಾ, ಚೇರಂಬಾಣೆಯ ಅರುಣ ವಿದ್ಯಾಸಂಸ್ಥೆಯ ಅಧ್ಯಕ್ಷ ಕುಂಡ್ಯೋಳಂಡ ಸುಬ್ಬಯ್ಯ, ಮಯ್ಯಾಸ್ ಸಂಸ್ಥೆ ಅಧಿಕಾರಿ ಮುರುಗೇಶ್ ಇತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.