ಗೋಣಿಕೊಪ್ಪಲು: ಕನ್ನಡ ನೆಲ, ಜಲ ರಕ್ಷಣೆಯೊಂದಿಗೆ ಕೊಡಗು ಕನ್ನಡಿಗರ ಮೇಲಾಗುತ್ತಿರುವ ದೌರ್ಜನ್ಯ ತಡೆಗಟ್ಟಲು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡಗು ಕನ್ನಡಿಗರ ಒಕ್ಕೂಟವು ಕನ್ನಡ ಭಾಷೆ ಮಾತನಾಡುವ ಕೊಡಗಿನ ಪ್ರಮುಖ ಜನಾಂಗಗಳನ್ನು ಒಕ್ಕೂಟದಿಂದ ದೂರವಿಟ್ಟಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.
ಈ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಈ ರೀತಿಯ ಸಂಘಟನೆ ಅಸ್ತಿತ್ವಕ್ಕೆ ತರುವ ಮೂಲಕ ಇಲ್ಲಿನವರಲ್ಲಿ ಒಡಕು ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಒಕ್ಕೂಟದ ಘೋಷಿತ ಅಧ್ಯಕ್ಷರಾದ ಎಸ್.ಪಿ ಮಹಾದೇವಪ್ಪನವರು ಈ ಹಿಂದೆ ಹಲವಾರು ವೇಷಗಳನ್ನು ತೊಟ್ಟಿದ್ದು, ಈಗ `ಕೊಡಗು ಕನ್ನಡಿಗರ ಒಕ್ಕೂಟ' ಎಂಬ ಹೆಸರಿನಲ್ಲಿ ಜಿಲ್ಲೆಯ ಸಾಮರಸ್ಯವನ್ನು ಕೆಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದರು.
ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವದಲ್ಲಿದ್ದು, ಅದು ಕನ್ನಡ ಭಾಷೆಗೆ ಪೂರಕವಾದ ಕಾರ್ಯಗಳನ್ನು ನಡೆಸುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಕುಟ್ಟದಲ್ಲಿ ನಡೆಸಲಾದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸ್ಥಳೀಯರು, ಪರಿಷತ್ ಸದಸ್ಯರು ಹಾಗೂ ದಾನಿಗಳ ಸಹಾಯದಿಂದ ಯಶಸ್ವಿಗೊಂಡಿದೆ. ಈ ಸಂದರ್ಭದಲ್ಲಿ ಸಮ್ಮೇಳನದಲ್ಲಿ ಕಾಣಿಸಿಕೊಳ್ಳದೇ ಕನ್ನಡತನವನ್ನು ಮರೆತಿರುವುದು ತಾಲ್ಲೂಕಿನ ಜನತೆ ಗಮನಿಸಿದ್ದಾರೆ ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.