ADVERTISEMENT

ಘಟಿಕೋತ್ಸವ: 35 ಚಿನ್ನದ ಪದಕ, 57 ನಗದು ಬಹುಮಾನ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 10:10 IST
Last Updated 23 ಫೆಬ್ರುವರಿ 2012, 10:10 IST

 ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ವಿವಿಯ 30ನೇ ಘಟಿಕೋತ್ಸವದಲ್ಲಿ 1411 ಮಂದಿ ಖುದ್ದು ಹಾಜರಾಗಿ ಪದವಿ ಪ್ರಮಾಣಪತ್ರ ಪಡೆಯಲಿದ್ದಾರೆ.

43 ಮಂದಿ ಡಾಕ್ಟರೇಟ್, 17 ಎಂಫಿಲ್, 182 ಮಂದಿಗೆ ಸ್ನಾತಕೋತ್ತರ ಪದವಿ, 1169 ಮಂದಿ ಪದವಿ ಸ್ವೀಕರಿಸುವರು. ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ. ಟಿ.ಸಿ.ಶಿವಶಂಕರಮೂರ್ತಿ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಘಟಿಕೋತ್ಸವದಲ್ಲಿ 44 ಮಂದಿಗೆ ಡಾಕ್ಟರೇಟ್ (ಕಲೆ- 1, ವಿಜ್ಞಾನ- 26, ವಾಣಿಜ್ಯ- 5), 17 ಮಂದಿ ಎಂಫಿಎಲ್ (ಕಲೆ-1, ವಿಜ್ಞಾನ- 9, ವಾಣಿಜ್ಯ- 7), 35 ಮಂದಿಗೆ ಚಿನ್ನದ ಪದಕ, 57 ಮಂದಿಗೆ ನಗದು ಬಹುಮಾನ ನೀಡಲಾಗುವುದು. ಒಟ್ಟು 62 ಮಂದಿಗೆ ರ‌್ಯಾಂಕ್ (ಸ್ನಾತಕೋತ್ತರ ಪದವಿ 44, ಪದವಿ 18; ಕಲೆ- 12, ವಿಜ್ಞಾನ ಮತ್ತು ತಂತ್ರಜ್ಞಾನ- 33, ವಾಣಿಜ್ಯ- 9, ಕಾನೂನು-3, ಶಿಕ್ಷಣ-3, ಸ್ನಾತಕೋತ್ತರ ಡಿಪ್ಲೊಮಾ-2) ನೀಡಲಾಗುವುದು ಎಂದರು.

ಶೇ 65 ಉತ್ತೀರ್ಣ:
ವಿವಿ 2010-11ನೇ ಸಾಲಿನಲ್ಲಿ ನಡೆಸಿದ ವಿವಿಧ ಪರೀಕ್ಷೆಗಳಲ್ಲಿ 26,222 ವಿದ್ಯಾರ್ಥಿಗಳು ಹಾಜರಾಗಿದ್ದು, 17,271 ಮಂದಿ (ಶೇ 65.86) ಮಂದಿ ಉತ್ತೀರ್ಣರಾಗಿದ್ದಾರೆ. ಅದರಲ್ಲಿ 2,984 ಮಂದಿ ಸ್ನಾತಕೋತ್ತರ ಪದವಿ ಪರೀಕ್ಷೆಗೆ ಹಾಜರಾಗಿದ್ದು, 2,732 (ಶೇ 91.56) ಮಂದಿ ಉತ್ತೀರ್ಣರಾಗಿದ್ದಾರೆ. ಪದವಿ ಪರೀಕ್ಷೆಗೆ 23,154 ಮಂದಿ ಹಾಜರಾಗಿದ್ದು, 14,460 (ಶೇ 62.45) ಮಂದಿ ಉತ್ತೀರ್ಣರಾಗಿದ್ದಾರೆ. ಸ್ನಾತಕೋತ್ತರ ಡಿಪ್ಲೊಮಾ ಪರೀಕ್ಷೆಗೆ ಹಾಜರಾದ 23 ವಿದ್ಯಾರ್ಥಿಗಳಲ್ಲಿ 18 (ಶೇ 78.26) ಮಂದಿ ಉತ್ತೀರ್ಣರಾಗಿದ್ದಾರೆ ಎಂದರು.

ಹುಡುಗಿಯರ ಮೇಲುಗೈ:
ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾದ 2,732 ವಿದ್ಯಾರ್ಥಿಗಳಲ್ಲಿ 1,079 (ಶೇ 39.49) ಹುಡುಗರು ಹಾಗೂ 1,653 (ಶೇ 60.51) ಹುಡುಗಿಯರು. ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 14,460 ವಿದ್ಯಾರ್ಥಿಗಳಲ್ಲಿ 5,170 (ಶೇ 35.75) ಹುಡುಗರು ಹಾಗೂ 9,290 (ಶೇ 64.25) ಹುಡುಗಿಯರು. ಸ್ನಾತಕೋತ್ತರ ಡಿಪ್ಲೊಮಾ ಪರೀಕ್ಷೆಯಲ್ಲಿ ಉತ್ತೀರ್ಣರಾದ 18 ವಿದ್ಯಾರ್ಥಿಗಳಲ್ಲಿ ಮೂವರು ಹುಡುಗರು ಮತ್ತು 15 (83.33) ಹುಡುಗಿಯರು. ಪರೀಕ್ಷೆಯಲ್ಲಿ ಉತ್ತೀರ್ಣರಾದ 17,271 ಮಂದಿಯಲ್ಲಿ 6,288 (ಶೇ 36.41) ಹುಡುಗರು ಮತ್ತು 10,983 (ಶೇ 63.59) ಹುಡುಗಿಯರು ಎಂದು ಅವರು ಮಾಹಿತಿ ನೀಡಿದರು.

ತೇರ್ಗಡೆಯಾದ ವಿದ್ಯಾರ್ಥಿಗಳಲ್ಲಿ 4,705 (ಶೇ 27.31) ಉನ್ನತ ಶ್ರೇಣಿಯಲ್ಲಿ, 7,004 (ಶೇ 40.66) ಪ್ರಥಮ ಶ್ರೇಣಿಯಲ್ಲಿ, 4,694 (ಶೇ 27.25) ದ್ವಿತೀಯ ಶ್ರೇಣಿಯಲ್ಲಿ, ಉಳಿದ 824 (ಶೇ 4.78) ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಪತ್ರಿಕಾಗೊಷ್ಠಿಯಲ್ಲಿ ವಿವಿ ಕುಲಸಚಿವ ಪ್ರೊಚಿನ್ನಪ್ಪ ಗೌಡ, ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಸ್. ಯಡಪಡಿತ್ತಾಯ, ಎಂಸಿಜೆ ವಿಭಾಗದ ಪ್ರಾಧ್ಯಾಪಕ ಜಿ.ಪಿ. ಶಿವರಾಮ್ ಇದ್ದರು.

ಮತ್ತೆರಡು ಚಿನ್ನದ ಪದಕ
ಈ ಸಾಲಿನಿಂದ ಮಂಗಳೂರು ವಿವಿಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಮತ್ತೆರಡು ಚಿನ್ನದ ಪದಕ ನೀಡಲಾಗುತ್ತಿದೆ.
ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಅವರು ದಿ. ರಾಮಕೃಷ್ಣ ಮಯ್ಯ ಅವರ ಹೆಸರಿನಲ್ಲಿ ಎರಡು ದತ್ತಿನಿಧಿ (ರೂ 2ಲಕ್ಷ) ಸ್ಥಾಪಿಸಿದ್ದು, ಎಂಸಿಜೆ ಹಾಗೂ ಎಂಬಿಎ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಗುತ್ತಿದೆ. ಈ ಸಲ ದತ್ತಿನಿಧಿ ಸ್ಥಾಪಿಸಿದರೆ ಮುಂದಿನ ವರ್ಷ ಅದರ ಬಡ್ಡಿ ಸಿಗುತ್ತದೆ.

ಈ ಸಾಲಿನಿಂದಲೇ ಚಿನ್ನದ ಪದಕ ನೀಡಬೇಕು ಎಂದು ಹೆಗಡೆ ತಿಳಿಸಿದರು. ಈ ಸಲ ಎರಡು ಚಿನ್ನದ ಪದಕಗಳಿಗೆ ಆಗುವ ರೂ 12,500 ಹಣವನ್ನು ಅವರು ಭರಿಸಿದ್ದಾರೆ ಎಂದು ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ ತಿಳಿಸಿದರು.

ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ (ಎಂಸಿಜೆ)ಯಲ್ಲಿ ಈ ಸಾಲಿನಿಂದ ಎರಡು ಚಿನ್ನದ ಪದಕ (ಟಿ.ಎಂ.ಎ.ಪೈ ಚಿನ್ನದ ಪದಕ, ದಿ. ರಾಮಕೃಷ್ಣ ಮಲ್ಯ ಚಿನ್ನದ ಪದಕ) ಹಾಗೂ ಎರಡು ನಗದು ಬಹುಮಾನಗಳನ್ನು ನೀಡಲಾಗುತ್ತಿದೆ.

ಎಂಸಿಜೆ ವಿಭಾಗದಲ್ಲಿ ಅಗತ್ಯವಿರುವ ಪ್ರಾಧ್ಯಾಪಕರ ನೇಮಿಸಿ ವಿಭಾಗವನ್ನು ಇನ್ನಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳಿಗೆ ಜಾಗ ಉಚಿತವಾಗಿ ಕೊಟ್ಟ ರಾಮಕೃಷ್ಣ ಮಲ್ಯ ಹೆಸರಿನಲ್ಲಿ ವೀರೇಂದ್ರ ಹೆಗಡೆ ಅವರು ಈ ದತ್ತಿನಿಧಿ ಸ್ಥಾಪಿಸಿದ್ದಾರೆ. 

ದತ್ತಿನಿಧಿ ಮೊತ್ತ ಒಂದು ಲಕ್ಷಕ್ಕೆ ಏರಿಕೆ

ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯ ಪರಿಣಾಮ ಮಂಗಳೂರು ವಿವಿಯ ದತ್ತಿನಿಧಿಗಳ ಮೇಲೂ ಆಗಿದೆ. ಈ ಸಾಲಿನಿಂದ ದತ್ತಿನಿಧಿಗಳ ಮೊತ್ತವನ್ನು ರೂ ಒಂದು ಲಕ್ಷಕ್ಕೆ ಏರಿಸಲಾಗಿದೆ. ಇನ್ನು ಮುಂದೆ ದತ್ತಿ ನಿಧಿ ಸ್ಥಾಪಿಸಲು ಇಚ್ಛಿಸುವವರು ರೂ ಒಂದು ಲಕ್ಷ ಪಾವತಿಸಬೇಕು. ಅದರ ಬಡ್ಡಿಯಿಂದ ಪ್ರತಿವರ್ಷ ಚಿನ್ನದ ಪದಕ ನೀಡಲಾಗುತ್ತದೆ.

ಈ ವರೆಗೆ ದತ್ತಿನಿಧಿ ಮೊತ್ತ ರೂ 50 ಸಾವಿರ ಇತ್ತು. ಅದರಿಂದ ಸಿಗುವ ಬಡ್ಡಿಯ ಮೊತ್ತ ರೂ 3,875. ಚಿನ್ನದ ಪದಕಕ್ಕೆ (25 ಗ್ರಾಂ ಬೆಳ್ಳಿ, ಅದರ ಸುತ್ತ 1.3 ಗ್ರಾಂ ಚಿನ್ನದ ಲೇಪನ) ರೂ 6,250 ಆಗುತ್ತದೆ. ಈ ಸಲ ಬಡ್ಡಿಯ ಜತೆಗೆ ವಿವಿ ಸಂಪನ್ಮೂಲ ಬಳಸಿ ಚಿನ್ನದ ಪದಕ ನೀಡಲಾಗುತ್ತಿದೆ ಎಂದು ಪ್ರೊ.ಟಿ.ಸಿ. ಶಿವಶಂಕರಮೂರ್ತಿ ತಿಳಿಸಿದರು.

ಕಳೆದ ತಿಂಗಳು ನಡೆದ ಸಿಂಡಿಕೇಟ್ ಸಭೆಯಲ್ಲಿ ದತ್ತಿನಿಧಿ ಮೊತ್ತ ಹೆಚ್ಚಿಸಲು ನಿರ್ಧರಿಸಲಾಯಿತು. ಈ ಹಿಂದೆ ದತ್ತಿನಿಧಿ ಸ್ಥಾಪಿಸಿದವರಿಗೂ ಪತ್ರ ಬರೆದು ಈ ವಿಚಾರ ತಿಳಿಸಲಾಗಿದೆ. ಅವರ ಉತ್ತರದ ನಿರೀಕ್ಷೆಯಲ್ಲಿದ್ದೇವೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT