ADVERTISEMENT

ಚೇಲಾವರದಲ್ಲಿ ಜಲಲಜಲಲ ಜಲಧಾರೆ..!

ಹಸಿರು ಕಾನನದ ಮಧ್ಯೆ ಹಾಲ್ನೊರೆಯ ಭೋರ್ಗರೆತ; ಪ್ರವಾಸಿಗರ ಸಂಖ್ಯೆ ಹೆಚ್ಚಳ

ಸಿ.ಎಸ್.ಸುರೇಶ್
Published 12 ಅಕ್ಟೋಬರ್ 2017, 10:46 IST
Last Updated 12 ಅಕ್ಟೋಬರ್ 2017, 10:46 IST
ಚೇಲಾವರದಲ್ಲಿ ಜಲಲಜಲಲ ಜಲಧಾರೆ..!
ಚೇಲಾವರದಲ್ಲಿ ಜಲಲಜಲಲ ಜಲಧಾರೆ..!   

ನಾಪೋಕ್ಲು: ಸಮೀಪದ ಚೇಲಾವರದಲ್ಲಿ ಈಗ ಜಲಪಾತಗಳ ಹಬ್ಬ. ಸತತ ಮಳೆಯಿಂದ ಜಲಪಾತಗಳು ಮೈದುಂಬಿಕೊಂಡಿದ್ದು, ಪ್ರವಾಸಿಗರನ್ನು ಬರಸೆಳೆಯುತ್ತಿವೆ.

ಸಾಲುಸಾಲು ರಜೆಯ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿದ್ದ ಪ್ರವಾಸಿಗರು ಭಾಗಮಂಡಲ ಸುತ್ತಮುತ್ತಲ ತಾಣಗಳಿಗೆ ಹೆಚ್ಚಿನ ಸಂಖ್ಯೆ ಭೇಟಿ ಕೊಟ್ಟರು. ಭಾಗಮಂಡಲ, ತಲಕಾವೇರಿ, ಪಾಡಿ ಇಗ್ಗುತ್ತಪ್ಪ ದೇವಾಲಯಗಳಿಗೂ ಭೇಟಿ ನೀಡಿದರು.

ಇದೆಲ್ಲಕ್ಕಿಂತ ಹೆಚ್ಚಿನ ಪ್ರವಾಸಿಗರು ತಾಲ್ಲೂಕಿನ ಚೇಲಾವರ ಜಲಪಾತ ಸೆಳೆಯುತ್ತಿದೆ. ಪ್ರವಾಸಿಗರ ವಾಹನಗಳ ದಟ್ಟಣೆಯಿಂದಾಗಿ ಬಹುತೇಕರು ನಡೆದುಕೊಂಡು ಹೊಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಲ್ಲು ಕೊರಕಲಿನ ಹಾದಿಯಲ್ಲಿ ಸಾಗಿದ ಹೆಚ್ಚಿನ ಪ್ರವಾಸಿಗರು ಜಲಪಾತದ ಎದುರು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ. ಕಾನನದ ಸುಂದರಿ ಚೇಲಾವರ ಜಲಪಾತದ ಚೆಲುವು ಆಸ್ವಾದಿಸುವುದೇ ಹಬ್ಬ. ಈಗ ಈ ಪ್ರದೇಶ ಹಸಿರು ಸೌಂದರ್ಯದಿಂದ ತುಂಬಿಕೊಂಡಿದೆ.

ADVERTISEMENT

ಬಂಡೆಗಲ್ಲುಗಳ ಮೇಲಿನಿಂದ ಧುಮುಕುವ ಚೇಲಾವರದ ಜಲಪಾತವನ್ನು ‘ಏಮೆಪಾರೆ’ ಜಲಪಾತವೆನ್ನುತ್ತಾರೆ. ಹಸಿರು ವನರಾಶಿಯ ನಡುವೆ ಹಾಲ್ನೊರೆಯಂತೆ ಧರೆಗಿಳಿಯುವ ಈ ಜಲಪಾತ ನಯನಮನೋಹರ.

ವಿರಾಜಪೇಟೆಯಿಂದ ಸುಮಾರು 26 ಕಿ.ಮೀ. ದೂರದಲ್ಲಿರುವ ಪುಟ್ಟ ಊರು ಚೆಯ್ಯಂಡಾಣೆಗೆ ತೆರಳಿ ಅಲ್ಲಿಂದ ಕವಲು ಹಾದಿಯಲ್ಲಿ 5 ಕಿ.ಮೀ. ದೂರಕ್ಕೆ ಸಾಗಿದರೆ ಹಲವು ಜಲಧಾರೆಗಳ ಸೊಬಗು ಸವಿಯಬಹುದು. ಕಾಫಿ ತೋಟಗಳ ನಡುವಿನ ತೂಂಗು ಕೊಲ್ಲಿಯತ್ತ ಹೆಜ್ಜೆ ಹಾಕುತ್ತಿದ್ದಂತೆ ಎಡಬದಿಯ ಕಣಿವೆಯಲ್ಲಿ ಆಮೆಯ ಬೆನ್ನಿನಂತೆ ಕಾಣುವ ಕಪ್ಪು ಬಂಡೆಯ ಮೇಲಿಂದ ಭೋರ್ಗರೆಯುವ ಸೋಮನ ನದಿಯ ಜಲಪಾತದ ದರ್ಶನವಾಗುತ್ತದೆ.

ಅನುಕೂಲ ಕಲ್ಪಿಸಲು ಆಗ್ರಹ:
ಜಲಪಾತಕ್ಕೆ ತರಳುವ ರಸ್ತೆಯನ್ನುಯ ದುರಸ್ತಿಯೇನೋ ಮಾಡಲಾಗಿದೆ. ಆದರೆ, ರಸ್ತೆ ಕಿರಿದಾಗಿದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಜಲಪಾತದ ಸಮೀಪ ಕಾಫಿ ತೋಟದ ಬದಿ ಮೆಟ್ಟಿಲುಗಳನ್ನು ನಿರ್ಮಿಸಿದರೆ ಪ್ರವಾಸಿಗರಿಗೆ ಸುಲಭವಾದೀತು ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಈ ನಡುವೆ ಜಲಧಾರೆಯ ಸೆಳೆತಕ್ಕೆ ಸಿಲುಕಿ ಸತ್ತವರು 18 ಮಂದಿ. ಸೆಲ್ಫಿ ತೆಗೆದುಕೊಳ್ಳುವ ಅಬ್ಬರದಲ್ಲಿ ಪ್ರಾಣ ಕಳೆದುಕೊಂಡವರೂ ಹೆಚ್ಚು. ಇನ್ನೊಂದೆಡೆ ಯುವ ಜನತೆಯ ಮೋಜಿ ನಾಟಕ್ಕೆ ನಿಯಂತ್ರಣ ಇಲ್ಲವಾಗಿದೆ. ಪ್ರವಾಸಿಗರ ಸುರಕ್ಷತೆಗೆ ಇನ್ನಷ್ಟು ವ್ಯವಸ್ಥೆ ಮಾಡಬೇಕು ಎಂಬುದು ಗ್ರಾಮಸ್ಥರ ಒತ್ತಾಸೆ.

***

ಜಲಪಾತಕ್ಕೆ ಸಾಗುವ ದಾರಿ ಹೊಂಡ– ಗುಂಡಿಗಳಿಂದ ಕೂಡಿದೆ. ಕಿರಿದಾದ ರಸ್ತೆಯನ್ನು ದುರಸ್ತಿ ಮಾಡಬೇಕಿದೆ. ಪ್ರವಾಸಿಗರಿಗೆ ಅಪಾಯದ ಸೂಚನೆ ನೀಡಬೇಕಿದೆ
ಬಾಚಮಂಡ ತಿಲಕ ಚಂಗುಮಯ್ಯ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.