ADVERTISEMENT

ಜಯದೇವ ಜಾನುವಾರು ಜಾತ್ರೆಗೆ ತೆರೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2013, 9:51 IST
Last Updated 7 ಫೆಬ್ರುವರಿ 2013, 9:51 IST
ಶನಿವಾರಸಂತೆ ಬಳಿ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಬುಧವಾರ ನಡೆದ ಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವದ ಮುಕ್ತಾಯ ಸಮಾರಂಭವನ್ನು ಅರೆಯೂರು ಜಯಣ್ಣ ಉದ್ಘಾಟಿಸಿದರು.
ಶನಿವಾರಸಂತೆ ಬಳಿ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಬುಧವಾರ ನಡೆದ ಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವದ ಮುಕ್ತಾಯ ಸಮಾರಂಭವನ್ನು ಅರೆಯೂರು ಜಯಣ್ಣ ಉದ್ಘಾಟಿಸಿದರು.   

ಶನಿವಾರಸಂತೆ: ಕೃಷಿ ಮತ್ತು ಪಶುಪಾಲನೆಯತ್ತ ಒಲವು ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಜಾನುವಾರುಗಳ ಜಾತ್ರೆ ಅತ್ಯಂತ ಮಹತ್ವ ಪಡೆದಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅರೆಯೂರು ಜಯಣ್ಣ ಹೇಳಿದರು.

ಸಮೀಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಬುಧವಾರ ನಡೆದ ಶ್ರೀ ಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನುವಾರುಗಳ ಕೊಡು-ಕೊಳ್ಳುವಿಕೆಗಾಗಿ ಆರಂಭವಾದ ಜಾತ್ರೆಯನ್ನು, ಮುಂದಿನ ಪೀಳಿಗೆಗಾಗಿ ಉಳಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಕೃಷಿಯ ಬಗ್ಗೆ ಹೆಚ್ಚಿನ ಗಮನ ಹರಿಸದಿರುವುದೇ ಜಾತ್ರೆಯಲ್ಲಿ ರಾಸುಗಳ ಸಂಖ್ಯೆ ಕಡಿಮೆಯಾಗಲು ಕಾರಣ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಬಿ. ಧರ್ಮಪ್ಪ ಮಾತನಾಡಿ, ಈ ಜತ್ರಾ ಮೈದಾನ ಸ್ವಾತಂತ್ರ್ಯ ಪೂರ್ವದಿಂದಲೇ ಆರಂಭವಾಗಿದ್ದರೂ ಇದುವರೆಗೆ ಅಭಿವೃದ್ಧಿ ಕಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಕೆ. ಚಿಣ್ಣಪ್ಪ ಮಾತನಾಡಿ, ಜಾತ್ರೆಗಳ ಆಚರಣೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಣ್ಮರೆಯಾಗಿದ್ದರೂ ಗುಡುಗಳಲೆಯಲ್ಲಿ ಮಾತ್ರ ನಿರಂತರವಾಗಿ ನಡೆದು ಬರುತ್ತಿರುವುದು ಹೆಮ್ಮೆಯ ಸಂಗತಿ.

ಸುಗ್ಗಿ ಕಾಲದಲ್ಲಿ ಮನರಂಜನೆಗಾಗಿ ನಡೆಸುವ ಜಾತ್ರಾ ಮಹೋತ್ಸವ ಭಾವೈಕ್ಯ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಜಾತ್ರಾ ಸಮಿತಿ ಮೈದಾನದಲ್ಲಿರುವ ದೇವಾಲಯಗಳ ಜೀರ್ಣೋದ್ಧಾರಕ್ಕೆ ಆದ್ಯತೆ ನೀಡಬೇಕು ಎಂದರು.

ಕಲ್ಲುಮಠದ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಹಾಗೂ ಶಿಡಿಗಳಲೆ ಮಠದ ಬಸವರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಶಂಭುಲಿಂಗಪ್ಪ, ಕೆ.ವಿ. ಮಂಜುನಾಥ್ ಹಾಗೂ ಡಿ.ಬಿ. ಸೋಮಪ್ಪ ಮಾತನಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಸಮಾರೋಪ ಭಾಷಣ ಮಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು.

ಉತ್ತಮ ರಾಸುಗಳಿಗೆ ಹಾಗೂ ಉತ್ತಮ ವಸ್ತುಗಳಿಗೆ ಬಹುಮಾನ ವಿತರಿಸಲಾಯಿತು. ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭುವನೇಶ್ವರಿ, ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಿನ್ನಮ್ಮ, ಜಾತ್ರಾ ಸಮಿತಿ ಅಧ್ಯಕ್ಷ ಎಂ.ಜೆ. ಪರಮೇಶ್, ಉಪಾಧ್ಯಕ್ಷೆ ದೇವಕಿ, ಕಾರ್ಯದರ್ಶಿ ಕೆ.ಎಲ್. ಮಂಜುನಾಥ್, ಪಿಎಸ್‌ಐ ಮಹದೇವಯ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.