ADVERTISEMENT

ಜೆಡಿಎಸ್ ಮುಖಂಡರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 6:25 IST
Last Updated 4 ಫೆಬ್ರುವರಿ 2012, 6:25 IST

ಮಡಿಕೇರಿ: ಜೆಡಿಎಸ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ವಿ.ಪಿ. ಶಶಿಧರ್ ಅವರನ್ನು ನೇಮಕ ಮಾಡಿದ್ದನ್ನು ತಡೆಹಿಡಿಯಬೇಕು ಎಂದು ಸ್ಥಳೀಯ ಮುಖಂಡರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಪಕ್ಷದ ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷ ಬಿ.ಎ. ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಪಾಲ್ಗೊಂಡ ಬಹುತೇಕ ಮುಖಂಡರು ತಮ್ಮ ಬೇಡಿಕೆಯನ್ನು ಮಂಡಿಸಿದರು.

ಈಗಿರುವಂತೆ ಶಾಂತು ಅಪ್ಪಯ್ಯ ಅವರನ್ನೇ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಮುಂದುವರಿಸಬೇಕು. ಪಕ್ಷಾಂತರಿಯಾಗಿರುವ ಶಶಿಧರ್ ಅವರನ್ನು ಯಾವ ಕಾರಣಕ್ಕೂ ಅಧ್ಯಕ್ಷರನ್ನಾಗಿ ಮಾಡಬಾರದು. ಅಧ್ಯಕ್ಷರನ್ನು ಬದಲಾವಣೆ ಮಾಡಿದರೆ ಪಕ್ಷ ಹೋಳಾಗುವ ಸಾಧ್ಯತೆ ಇದೆ ಎಂದು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಂತು ಅಪ್ಪಯ್ಯ ಹಾಗೂ ಜಿಲ್ಲೆಯ ಹಿರಿಯ ರಾಜಕಾರಣಿಯಾಗಿರುವ ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಅವರ ಗಮನಕ್ಕೂ ಬಾರದೆ ಈ ಬದಲಾವಣೆ ಮಾಡಿರುವುದು ಸರಿಯಲ್ಲ. ಸ್ಥಳೀಯ ನಾಯಕರ ಅಭಿಪ್ರಾಯ ಪಡೆಯಬೇಕಿತ್ತು ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಎಂ.ಎ. ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕಳೆದ ಡಿಸೆಂಬರ್ 30ರಂದು ನಗರದಲ್ಲಿ ನಡೆದ ಸಭೆಯಲ್ಲಿ ಶಾಂತು ಅಪ್ಪಯ್ಯ ಅವರನ್ನೇ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಮುಂದುವರಿಸಲು ನಿರ್ಧರಿಸಲಾಗಿತ್ತು. ಆದರೆ, ಪಕ್ಷದ ಹೈಕಮಾಂಡ್ ಈ ನಿರ್ಧಾರವನ್ನು ಮನ್ನಿಸದೇ ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರನ್ನು ಅವಮಾನಿಸಿದೆ ಎಂದು ಅವರು ಅಳಲು ತೋಡಿಕೊಂಡರು.

ತಮ್ಮ ಈ ನಿರ್ಧಾರವನ್ನು ಪಕ್ಷದ ವರಿಷ್ಠರು ಪುನರ್‌ಪರಿಶೀಲಿಸಬೇಕು. ಪಕ್ಷದಲ್ಲಿ ಹಲವಾರು ವರ್ಷಗಳ ಕಾಲ ದುಡಿದ ನೂರಾರು ಜನ ಮುಖಂಡರಿದ್ದಾರೆ. ಅವರನ್ನು ಬಿಟ್ಟು, ನಿನ್ನೆ-ಮೊನ್ನೆ ಪಕ್ಷಕ್ಕೆ ಸೇರ್ಪಡೆಯಾದವರಿಗೆ ಜಿಲ್ಲಾಧ್ಯಕ್ಷರ ಸ್ಥಾನ ನೀಡುವ ಅಗತ್ಯವಿರಲಿಲ್ಲ ಎಂದು ಹೇಳಿದರು.

ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷ ಬಿ.ಕೆ. ಚಿಣ್ಣಪ್ಪ ಮಾತನಾಡಿ, ವಿ.ಪಿ. ಶಶಿಧರ್ ಹಿಂದೊಮ್ಮೆ ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ್ದರು. ಕತ್ತೆಗೆ ವರಿಷ್ಠರ ಭಾವಚಿತ್ರ ಅಂಟಿಸಿ, ಪ್ರತಿಭಟನೆ ನಡೆಸಿದ್ದರು. ಅಂತಹ ವ್ಯಕ್ತಿಗೆ ಇಂದು ಏಕೆ ಮಣೆ ಹಾಕಲಾಗಿದೆ ಎಂದು ಪ್ರಶ್ನಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್ ಮಾತನಾಡಿ, ಜಿಲ್ಲಾಧ್ಯಕ್ಷರ ನೇಮಕ ಕುರಿತು ಬೆಂಗಳೂರಿನಲ್ಲಿ ಸಭೆ ಕರೆಯಲಿ. ಅಲ್ಲಿ ಎಲ್ಲರೂ ಒಟ್ಟಾಗಿ ನಿರ್ಧಾರ ಕೈಗೊಳ್ಳೋಣ ಎಂದರು. ಸಭೆಯಲ್ಲಿ ಮುಖಂಡರು ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು ಎಂದರು. 
  
 ಮಡಿಕೇರಿ ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಹೊಸೂರು ಸತೀಶ್ ಜೋಯಪ್ಪ ಮಾತನಾಡಿ, ಅತ್ಯಂತ ಕಷ್ಟಕರ ಸಮಯದಲ್ಲಿ ನಾವೆಲ್ಲ ಒಟ್ಟಾಗಿ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಲು ಹಗಲಿರುಳು ದುಡಿದ್ದೇವೆ. ವರಿಷ್ಠರು ತಮ್ಮ ನಿರ್ಧಾರ ಕೈಗೊಳ್ಳುವ ಮೊದಲು ನಮ್ಮ ಅಭಿಪ್ರಾಯವನ್ನು ಆಲಿಸಲಿ ಎಂದು ಒತ್ತಾಯಿಸಿದರು.
 
ಪಕ್ಷದ ಮುಖಂಡ ಕೆ.ಸಿ. ಹರೀಶ್ ಮಾತನಾಡಿ, ಸ್ಥಳೀಯ ಮುಖಂಡರ ಅಭಿಪ್ರಾಯವನ್ನು ಮನ್ನಿಸದೆ ವರಿಷ್ಠರು ಪಕ್ಷದ ಹೊರಗಿನ ವ್ಯಕ್ತಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದರೆ ಜಿಲ್ಲೆಯಲ್ಲಿ ಪಕ್ಷವು ಒಡೆದುಹೋಗುವ ಆತಂಕವಿದೆ ಎಂದರು.

ಜಿಲ್ಲಾ ಕಾರ್ಯದರ್ಶಿ ಕೆ.ಪಿ. ನಾಗರಾಜ್,  ಸೋಮವಾರಪೇಟೆ ಅಧ್ಯಕ್ಷ ಸಿ.ವಿ. ನಾಗೇಶ್, ಪೆರಾಜೆ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಜಿ. ಹರೀಶ್, ನಾಗೇಶ್, ಮನ್ಸೂರ್, ಪಿ.ಎ. ಯೂಸೂಫ್ ಅಶ್ರಫ್, ಇತರರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.