ADVERTISEMENT

`ದೇವರಕಾಡು: ಕಾಮಗಾರಿ ಕೈಗೊಳ್ಳದಿರಲು ಸೂಚನೆ'

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2013, 7:01 IST
Last Updated 12 ಏಪ್ರಿಲ್ 2013, 7:01 IST

ಮಡಿಕೇರಿ: `ದೇವರಕಾಡು ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಾಮಗಾರಿಗಳನ್ನು ನಡೆಸಲು ಅನುಮತಿ ಪತ್ರ ಅಥವಾ ಎನ್‌ಒಸಿ ಪತ್ರ ನೀಡಬಾರದು. ಈ ಕುರಿತು ನ್ಯಾಯಾಲಯ ನೀಡಿರುವ ಆದೇಶವನ್ನು ಪಾಲಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ' ಎಂದು ಬಸವಣ್ಣ ದೇವರ ಬನದ ಟ್ರಸ್ಟಿ ಬಿ.ಸಿ ನಂಜಪ್ಪ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ದೇವರಕಾಡು ಗೋಮಾಳ, ಊರುಡುವೆ, ನದಿ-ಕೆರೆ ಪಾತ್ರ ಹಾಗೂ ನಾಲೆದಂಡೆಯಲ್ಲಿ ಯಾವುದೇ ರೀತಿಯ ಕಾಮಗಾರಿಗಳನ್ನು ಕೈಗೊಳ್ಳಬಾರದೆಂದು ಜಿಲ್ಲಾ ಪಂಚಾಯಿತಿ ಸಿಇಒ ಅವರು ಆದೇಶಿಸಿದ್ದಾರೆ ಎಂದರು.

ಈ ಪ್ರದೇಶಗಳಲ್ಲಿ ಸರ್ಕಾರದ ಯಾವುದೇ ಅನುದಾನವನ್ನು ಬಳಸುವಂತಿಲ್ಲ. ಈ ಆದೇಶ ವಾಲ್ನೂರು ತ್ಯಾಗತ್ತೂರು ಪ್ರದೇಶಕ್ಕೆ ಮಾತ್ರ ಸಿಮೀತ. ಮಾಡದೇ ಜಿಲ್ಲೆಯ ಎಲ್ಲಾ ದೇವರ ಬನಗಳಿಗೂ ಅನ್ವಯಿಸಬೇಕು. ಇಲ್ಲವಾದಲ್ಲಿ ಪುನಃ ಕಾನೂನು ಮೂಲಕ ಈ ಆದೇಶದ ವಿಸ್ತರಣೆಗೆ ಕ್ರಮ ವಹಿಸುವುದಾಗಿ ಅವರು ತಿಳಿಸಿದರು.

ಗುಡ್ಡೆಹೊಸೂರು ಸಮೀಪದ ಬಳ್ಳೂರು ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಅಕ್ರಮವಾಗಿ ದೇವರ ಬನಗಳನ್ನು ಒತ್ತುವರಿ ಮಾಡಿಕೊಂಡಿರುವವರನ್ನು ತೆರವುಗೊಳಿಸದಿದ್ದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

`ಕೊಡಗಿನ ಹಿತಕ್ಕಾಗಿ ಮತ ನೀಡಿ'
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಹಣ, ಹೆಂಡಕ್ಕೆ ಮಾರು ಹೋಗದೆ, ನಿಜವಾಗಿ ಕೊಡಗಿನ ನೆಲ, ಜಲ, ಅರಣ್ಯ ಸಂಪತ್ತನ್ನು ಉಳಿಸಿ, ಜನರ ಹಿತ ಕಾಯುವ ವ್ಯಕ್ತಿಗೆ ಮತ ನೀಡುವಂತೆ ಅವರು ಕರೆ ನೀಡಿದರು.

ಜಿಲ್ಲೆಯಲ್ಲಿ ದೇವರ ಬನ ಸೇರಿದಂತೆ ಅರಣ್ಯ ಪ್ರದೇಶಗಳು ನಾಶವಾಗಲು ಬಿಜೆಪಿ ಮತ್ತು ಕಾಂಗ್ರೆಸ್ಸಿಗರೇ ಕಾರಣ. ಚೆರಿಯಪೆರಂಬುವಿನಲ್ಲಿ ಜಾಗ ಅತಿಕ್ರಮಣವಾಗಲು ಕಾಂಗ್ರೆಸ್ಸಿಗರೇ ಕಾರಣ ಎಂದು ಆರೋಪಿಸಿದರು.

`ರಂಜನ್ ಆಣೆ ಮಾಡಲಿ'
ವಾಲ್ನೂರು ದೇವರ ಬನದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಲು ಅಪ್ಪಚ್ಚು ರಂಜನ್ ಅವರು ಶೇ 17ರಷ್ಟು ಕಮೀಷನ್ ಪಡೆದಿದ್ದಾರೆ. ಇದನ್ನು ಅಲ್ಲಗಳೆಯುತ್ತಿರುವ ಅವರು ದೇವರ ಮೇಲೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಪ್ರಮುಖರು ದೇವರ ಕಾಡುಗಳ ಮಾರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಹೊರ ರಾಜ್ಯದವರಿಗೆ ಗೋಮಾಳ ಜಾಗಗಳನ್ನು ಮಾರಾಟ ಮಾಡಲು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ಪ್ರಮುಖರು ಜಿಲ್ಲೆಯಲ್ಲಿ ಮತ ಯಾಚಿಸಬಾರದು. ಇಲ್ಲವಾದಲ್ಲಿ ಮುಂದಾಗುವ ಅನಾಹುತಕ್ಕೆ ಅವರೇ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದರು. ಟ್ರಸ್ಟ್ ಅಧ್ಯಕ್ಷ ಜಫ್ರಿ ಮುತ್ತಣ್ಣ, ಟ್ರಸ್ಟಿಗಳಾದ ಟಿ.ವಿ. ಆನಂದ, ಎಸ್.ಎಸ್. ಕಾರ್ಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.