ADVERTISEMENT

ದೇವಸ್ಥಾನದ ಜಾಗ ಪರಭಾರೆ ತಡೆದಿದ್ದರಿಂದಲೇ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 8:30 IST
Last Updated 16 ಅಕ್ಟೋಬರ್ 2011, 8:30 IST

ಮಡಿಕೇರಿ: ಮಂಡ್ಯದ ಕಾವೇರಿ ತೀರ್ಥೋದ್ಭವ ಅನ್ನಸಂತರ್ಪಣ ಸಮಿತಿಗೆ ತಲಕಾವೇರಿಯಲ್ಲಿ ಜಾಗ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದಲೇ ನಮ್ಮನ್ನು ಅನ್ನದಾನ ಪ್ರಕ್ರಿಯೆಯಿಂದ ದೂರ ಇಡ ಲಾಗಿದೆ ಎಂದು ಕೊಡಗು ಏಕೀಕರಣ ರಂಗದ ಪದಾಧಿ ಕಾರಿಗಳು ಆರೋಪಿಸಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಂಗದ ಪ್ರಮುಖರಾದ ಬಿ.ಎಸ್. ತಮ್ಮಯ್ಯ, ದೇವಸ್ಥಾನದ ಪವಿತ್ರ ಜಾಗವನ್ನು ಯಾರಿಗೂ ನೀಡಬಾರದು ಎನ್ನುವುದು ನಮ್ಮ ವಾದ ಎಂದರು.

ಮಂಡ್ಯ ಸಮಿತಿಗೆ ಜಾಗ ನೀಡಲು ಜಿಲ್ಲಾಡಳಿತ ಮುಂದಾಗಿರುವುದಕ್ಕೆ ನಮ್ಮದು ಸಂಪೂರ್ಣ ವಿರೋಧ ಇದೆ. ಆದರೆ, ಅನ್ನಸಂತರ್ಪಣೆಗೆ ಅಲ್ಲ. ಯಾವ ಸಂಘಗಳಾದರೂ ಅನ್ನದಾನ ಮಾಡಬಹುದು. ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದರು.

ಕಳೆದ 20 ವರ್ಷಗಳಿಂದ ಸುಸೂತ್ರವಾಗಿ ತಲ ಕಾವೇರಿಯಲ್ಲಿ ಅನ್ನದಾನ ನಡೆಸಿಕೊಂಡು ಬಂದಿರು ವಾಗ ಈಗ ಪರಿಸರಕ್ಕೆ ಧಕ್ಕೆ ಉಂಟಾಗುತ್ತದೆ ಎಂದರೆ ಹೇಗೆ? ಎಂದು ಅವರು ಪ್ರಶ್ನಿಸಿದರು.

ಅನ್ನದಾನ ಹೆಸರಿನಲ್ಲಿ ನಾವು ಯಾವುದೇ ದಂಧೆ ನಡೆಸುತ್ತಿಲ್ಲ. ಆರ್ಥಿಕ ಸಹಾಯ ನೀಡುವ ಪ್ರತಿಯೊಬ್ಬ ದಾನಿಗೂ ಲೆಕ್ಕಪತ್ರ ನೀಡುತ್ತೇವೆ ಎಂದರು.

ಅನ್ನದಾನಕ್ಕೆಂದೇ ದೇವಸ್ಥಾನದ ಆವರಣದಲ್ಲಿ ಅನ್ನಛತ್ರ ನಿರ್ಮಿಸಿರುವಾಗ ನಾವು ಏಕೆ ಹೊರಗೆ ಅನ್ನದಾನ ಮಾಡಬೇಕು. ಆದ್ದರಿಂದ ಈ ಸಲದಿಂದ ಅನ್ನದಾನ ಮಾಡುವುದನ್ನು ನಾವು ಕೈಬಿಟ್ಟಿದ್ದೇವೆ ಎಂದು ಅವರು ಹೇಳಿದರು.

ಜೀರ್ಣೋದ್ಧಾರ ಸಮಿತಿಗೆ ವಿರೋಧ
ದೇವಸ್ಥಾನದ ಎಲ್ಲ ಜೀರ್ಣೋದ್ಧಾರ ಕೆಲಸಗಳು ಮುಗಿದಿದ್ದರೂ ಕೂಡ ಭಾಗಮಂಡಲ-ತಲಕಾವೇರಿ ಜೀರ್ಣೋದ್ಧಾರ ಸಮಿತಿಯನ್ನು ಜಿಲ್ಲೆಯ ಪ್ರಭಾವಿ ಜನಪ್ರತಿನಿಧಿಗಳು ಏಕೆ ರಚಿಸಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಇದು ಮುಜರಾಯಿ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದರ ವಿರುದ್ಧ ಕಾನೂನಿನ ಸಮರ ನಡೆಸುವುದಾಗಿ ಅವರು ಹೇಳಿದರು.

ಈ ಸಮಿತಿಯಲ್ಲಿ ಕೇವಲ ಜನಪ್ರತಿನಿಧಿಗಳು ತಮ್ಮ ಪಕ್ಷದವರನ್ನೇ ಸದಸ್ಯರನ್ನಾಗಿ ನೇಮಿಸಿದ್ದಾರೆ. ಇದರಲ್ಲಿ ಸ್ಥಳೀಯರಿಗಾಗಲಿ, ಸಮಾಜಸೇವಕರಿಗಾಗಲಿ ಅವಕಾಶ ನೀಡಿಲ್ಲ ಎಂದು ಅವರು ಆರೋಪಿಸಿದರು. 
ದೇವಸ್ಥಾನದ ವಿಷಯದಲ್ಲಿ ರಾಜಕೀಯ ಮಾಡುತ್ತಿರುವವರ ವಿರುದ್ಧ ಸ್ಥಳೀಯ ಜನರು ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ತಮ್ಮು ಪೂವಯ್ಯ, ಎಂ.ಕೆ. ಅಪ್ಪಚ್ಚು, ಪಿ.ಎಂ. ಮುತ್ತಣ್ಣ, ಸೋಮಯ್ಯ, ನಂದೇಟಿರ ರಾಜ ಮಂದಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.