ADVERTISEMENT

ಪ.ಪಂ: ಫೆ. 27 ರಂದು ಉಪ ಚುನಾವಣೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 8:45 IST
Last Updated 5 ಫೆಬ್ರುವರಿ 2011, 8:45 IST

ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಪಂಚಾಯಿತಿಯ 12ನೇ ವಿಭಾಗಕ್ಕೆ ಉಪ ಚುನಾವಣೆ ಫೆ.27ರಂದು ನಡೆಯಲಿದೆ ಎಂದು ತಾಲ್ಲೂಕು ಸಹಾಯಕ ಚುನಾವಣಾಧಿಕಾರಿ ವಿ.ಹನುಂತರಾಯಪ್ಪ ತಿಳಿಸಿದ್ದಾರೆ.

ಉಪ ಚುನಾವಣೆ ಸಂಬಂಧದಲ್ಲಿ ಫೆ.8ರಂದು ಚುನಾವಣಾಧಿಕಾರಿಯವರು ಅಧಿಸೂಚನೆ ಹೊರಡಿಸಲಿದ್ದು ಫೆ. 15 ರಿಂದ 17ರ ತನಕ ನಾಮಪತ್ರ ಸಲ್ಲಿಕೆ, ನಂತರ ನಾಮಪತ್ರಗಳ ಪರಿಶೀಲನೆ, ಫೆ.19 ನಾಮಪತ್ರಗಳನ್ನು  ಹಿಂತೆಗೆಯಲು ಅಂತಿಮ ದಿನವಾಗಿದೆ. 27 ರಂದು ಮತದಾನ ನಡೆಯಲಿದೆ.

ಮೀನುಪೇಟೆ, ಗೌರಿಕೆರೆ, ಪೊಲೀಸ್ ವಸತಿ ಗೃಹಗಳನ್ನು ಒಳಗೊಂಡಿರುವ ಈ ವಿಭಾಗದಲ್ಲಿ ಸುಮಾರು  960  ಮತದಾರರಿದ್ದಾರೆ. ಈ ವಿಭಾಗದಿಂದ ಆಯ್ಕೆಯಾಗಿದ್ದ ಜೆಡಿಎಸ್ ನ ಕಾಂತಿ ಬೆಳ್ಳಿಯಪ್ಪ ಅವರು ತಮ್ಮ ಸ್ಥಾನಕ್ಕೆ   ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ನಡೆಯುತ್ತಿದೆ.

ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು:  ಪಟ್ಟಣ ಪಂಚಾಯಿತಿಯ ಪ್ರತಿಷ್ಠಿತ ಕ್ಷೇತ್ರ ಎನಿಸಿರುವ 12ನೇ ವಿಭಾಗಕ್ಕೆ ಅಭ್ಯರ್ಥಿಗಳ ಆಯ್ಕೆಗೆ  ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಸರತ್ತು ನಡೆಸಿವೆ.

ಸಾಮಾನ್ಯ ಮಹಿಳೆಯ ಮೀಸಲು ಕ್ಷೇತ್ರವಾಗಿರುವ ಈ ವಿಭಾಗದಲ್ಲಿ ಸ್ಪರ್ಧಿಸಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪೂರ್ವ ಸಿದ್ಧತೆ ನಡೆಸಿವೆ. ಪಕ್ಷೇತರರು ಅಧಿಕ ಸಂಖ್ಯೆಯಲ್ಲಿ ಸ್ಪರ್ಧಿಸಿ ರಾಜಕೀಯ ಪಕ್ಷಗಳಿಗೆ ಸವಾಲು  ಒಡ್ಡಲಿರುವ ಸಂಭವವೇ ಹೆಚ್ಚಾಗಿದೆ.

ಪ.ಪಂ. 16 ಸ್ಥಾನಗಳಿಗೆ 2007ರ ಆಗಸ್ಟ್‌ನಲ್ಲಿ ಚುನಾವಣೆ ನಡೆದಿತ್ತು. ಮೀಸಲಾತಿ  ಆಧಾರದ ಮೇಲೆ 2008ರ ಮಾರ್ಚ್ 3 ರಂದು ಜೆಡಿಎಸ್‌ನ ಕಾಂತಿ ಬೆಳ್ಳಿಯಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.