ಮಡಿಕೇರಿ: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾಗಿ ಉತ್ತಮ ಕೆಲಸ ಮಾಡಿ ನಿವೃತ್ತಿಯಾಗಿರುವ ಪುಷ್ಪ ಕುಟ್ಟಣ್ಣ ಅವರು ವಿಶ್ವವಿದ್ಯಾಲಯವೊಂದರ ಕುಲಪತಿಯಾಗುವ ಎಲ್ಲ ಅರ್ಹತೆಗಳಿವೆ. ಮುಂದೊಂದು ದಿನ ತಮಗೆ ಅವಕಾಶ ದೊರೆತರೆ ಇವರನ್ನು ಕುಲಪತಿಯನ್ನಾಗಿ ನೇಮಕ ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಪ್ರಕಟಿಸಿದರು.
ನಗರದಲ್ಲಿ ಶನಿವಾರ ನಡೆದ ಕಾಲೇಜಿನ 63ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅವರು ಮಾತನಾಡಿದರು. ಕುಲಪತಿಗಳ ಆಯ್ಕೆ ಸಂದರ್ಭದಲ್ಲಿ ಸರ್ಕಾರವು ಸೂಚಿಸುವ ಹೆಸರನ್ನು ರಾಜ್ಯಪಾಲರು ಒಪ್ಪಿಕೊಳ್ಳುವುದು ಸಹಜ.
ಹಿಂದೊಮ್ಮೆ ನಾನು ಸರ್ಕಾರದಲ್ಲಿದ್ದಾಗ ಕೆಲವು ಕುಲಪತಿಗಳ ಹೆಸರನ್ನು ಸೂಚಿಸಿದ್ದೆ. ಈಗ ನಾನು ಸರ್ಕಾರದಲ್ಲಿಲ್ಲ, ಮುಂದೊಂದು ದಿನ ಮತ್ತೆ ನಮಗೆ ಅಧಿಕಾರ ದೊರೆತರೆ ಪುಷ್ಪ ಕುಟ್ಟಣ್ಣ ಅವರನ್ನು ರಾಜ್ಯದ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ಕುಲಪತಿಯನ್ನಾಗಿ ನೇಮಿಸುತ್ತೇನೆ ಎಂದರು.
ಈ ಕಾಲೇಜಿನಲ್ಲಿ ಸುಮಾರು ಮೂರು ದಶಕಗಳ ಕಾಲ ದುಡಿದ ಪುಷ್ಪ ಅವರು ಕಾಲೇಜಿಗೆ ಅತ್ಯುತ್ತಮವಾದ ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದಾರೆ. ಈ ಶಿಕ್ಷಣ ಸಂಸ್ಥೆಯು ಜಿಲ್ಲೆಯ ಶೈಕ್ಷಣಿಕ ರಂಗಕ್ಕೆ ಬಹು ದೊಡ್ಡ ಕೊಡುಗೆಯಾಗಿದೆ ಎಂದು ಅವರು ಪ್ರಶಂಶಿಸಿದರು.
ಇಂದು ಹಲವಾರು ವಿಶ್ವವಿದ್ಯಾಲಯಗಳು ಭ್ರಷ್ಟಾಚಾರ, ಹಗರಣ, ಗುಂಪುಗಾರಿಕೆಯಿಂದಾಗಿ ಅಪಖ್ಯಾತಿಗೆ ಒಳಗಾಗಿವೆ. ಇಂತಹ ಹೊಲಸುತನದಿಂದ ಮಂಗಳೂರು ವಿಶ್ವವಿದ್ಯಾಲಯ ಬಹಳ ದೂರವಿದೆ ಎಂದು ಹೆಮ್ಮೆಯಿಂದ ಹೇಳಬಲ್ಲೆ ಎಂದು ಅವರು ಹೇಳಿದರು.
ಜಾತಿ, ಮತ, ಗುಂಪುಗಾರಿಕೆ ಹಾಗೂ ರಾಜಕೀಯವನ್ನು ಬೆರೆಸದೆ ಶಿಕ್ಷಣ ಸಂಸ್ಥೆಯನ್ನು ಗುರುಗಳು ಕಟ್ಟಬೇಕು. ಇದಕ್ಕೆ ತದ್ವಿರುದ್ಧವಾಗಿ ನಡೆಯುವಂತಹ ಶಿಕ್ಷಕರು ಕಂಡುಬಂದರೆ ಕುಲಪತಿಗಳು ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ. ಟಿ.ಸಿ. ಶಿವಶಂಕರ ಮೂರ್ತಿ ಮಾತನಾಡಿ, ವೈದ್ಯರು, ಎಂಜಿನಿಯರ್‌ಗಳು ಭ್ರಷ್ಟರಾದರೆ ಕೆಲವು ಜನರಿಗೆ ಮಾತ್ರ ತೊಂದರೆಯಾಗಬಹುದು. ಆದರೆ ಶಿಕ್ಷಕರು ಭ್ರಷ್ಟರಾದರೆ ಇಡೀ ತಲೆಮಾರು ನಾಶವಾದಂತೆ. ಆದ್ದರಿಂದ ಶಿಕ್ಷಕರು ಶ್ರದ್ಧೆಯಿಂದ ಕೆಲಸ ನಿರ್ವಹಿಸಬೇಕಾಗಿದೆ ಎಂದು ಅವರು ಕರೆ ನೀಡಿದರು.
ಕಾಲೇಜಿನ ಶ್ರೇಯೋಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳು ಶ್ರದ್ಧೆಯಿಂದ ಕೆಲಸ ನಿರ್ವಹಿಸಿದರೆ ಮುಂದೊಂದು ದಿನ ಈ ಶಿಕ್ಷಣ ಸಂಸ್ಥೆ ವಿಶ್ವವಿದ್ಯಾಲಯವಾಗಿ ರೂಪುಗೊಳ್ಳುವಲ್ಲಿ ಸಂಶಯವಿಲ್ಲ ಎಂದರು.
ಚಿಕ್ಕಅಳುವಾರದಲ್ಲಿ ನಿರ್ಮಿಸಲಾಗುತ್ತಿರುವ ವಿಜ್ಞಾನ ಕೇಂದ್ರ 2013ರ ವೇಳೆಗೆ ಪೂರ್ಣಗೊಳ್ಳಲಿದೆ. ಬಾಲಕರು, ಬಾಲಕಿಯರ ಹಾಸ್ಟೇಲ್, ಶಿಕ್ಷಕರಿಗೆ ವಸತಿ ಗೃಹಗಳು, ರಸ್ತೆ ಸೇರಿದಂತೆ ಇತರ ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.
ಈ ಕೇಂದ್ರದ ಜಾಗ 70 ಎಕರೆ ಸುತ್ತಮುತ್ತ ಕಾಲೇಜಿನ 50 ಎಕರೆ ಹೆಚ್ಚುವರಿ ಜಾಗವಿದೆ. ಇದನ್ನು ಕೂಡ ವಿಜ್ಞಾನಕೇಂದ್ರಕ್ಕೆ ಹಸ್ತಾಂತರಿಸಿದರೆ ಹತ್ತು ವರ್ಷದೊಳಗೆ ಅತ್ಯುತ್ತಮವಾದ ಕ್ಯಾಂಪಸ್ ನಿರ್ಮಿಸಲು ಸಾಧ್ಯವಾಗುತ್ತದೆ. ಇದಕ್ಕೆ ಸ್ಥಳೀಯ ನಾಯಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಸನ್ಮಾನ: ನಿವೃತ್ತ ಪ್ರಾಂಶುಪಾಲ ಪುಷ್ಪ ಕುಟ್ಟಣ್ಣ, ಕೇಂದ್ರ ಪ್ರಶಸ್ತಿ ಪುರಸ್ಕೃತ ಶ್ರೀಧರ ಹೆಗಡೆ, ಎಂ.ಆರ್. ಚರಿತಾ ಹಾಗೂ ಹಾಕಿ ಕ್ರೀಡಾಪಟು ಪೊನ್ನಮ್ಮ (ಇವರ ಪರವಾಗಿ ಪೋಷಕರು) ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎ. ಈರಪ್ಪ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಸಲಹೆಗಾರ ಶ್ರೀಧರ ಹೆಗಡೆ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಮಂಗಳೂರು ವಿವಿ ಕುಲಸಚಿವ ಪ್ರೊ.ಕೆ. ಚಿನ್ನಪ್ಪಗೌಡ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಕೆ.ಕೆ. ದೇವಯ್ಯ, ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.