ADVERTISEMENT

ಬತ್ತಕ್ಕೆ ಬೆಂಕಿ ರೋಗ: ಆತಂಕ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 7:45 IST
Last Updated 3 ಅಕ್ಟೋಬರ್ 2012, 7:45 IST
ಬತ್ತಕ್ಕೆ ಬೆಂಕಿ ರೋಗ: ಆತಂಕ
ಬತ್ತಕ್ಕೆ ಬೆಂಕಿ ರೋಗ: ಆತಂಕ   

ಗೋಣಿಕೊಪ್ಪಲು: ಮಳೆ ಕೊರತೆಯಿಂದ ಒಣಗುತ್ತಿರುವ ಬತ್ತದ ಬೆಳೆಗೆ ಬೆಂಕಿರೋಗ ತಗುಲಿದ್ದು ಇಂಟಾನ್ ತಳಿ ನೆಲದಲ್ಲಿಯೇ ನಲುಗಿದೆ.  

ಕಾರ್ಮಿಕರ ಕೊರತೆಯಿಂದ ಬಳಲುತ್ತಿರುವ ಬತ್ತದ ಕೃಷಿಗೆ ಈಗ ರೋಗದ ಬಾಧೆ ಬರೆ ಎಳೆದಿದೆ. ಭೀಕರ ಬಿಸಿಲಿನಿಂದ ಗದ್ದೆಗಳಿಗೆ ನೀರಿಲ್ಲದೇ ಕಂಗೆಟ್ಟಿರುವ ಕೃಷಿಕರು ಈಗ ರೋಗ ಬಾಧೆಯಿಂದ ಹತಾಶರಾಗಿದ್ದಾರೆ.

ಈ ಬಗ್ಗೆ ಪ್ರಜಾವಾಣಿಯೊಂದಿಗೆ ಮಾತನಾಡಿದ ಪೊನ್ನಂಪೇಟೆ ಕೃಷಿ ಸಂಶೋಧನಾ  ಕೇಂದ್ರದ ವಿಜ್ಞಾನಿ ಡಿ ದೇವರಾಜು ಕೊಡಗಿನ ಪರಿಸರಕ್ಕೆ ಕೆಪಿಆರ್-1, ಕೆಪಿಆರ್-2 (ಕರ್ನಾಟಕ ಪೊನ್ನಂಪೇಟೆ ರಿಸರ್ಚ್ ಸೆಂಟರ್) ಬತ್ತದ ತಳಿ ಉತ್ತಮವಾಗಿದೆ.

ಇದು ಬೆಂಕಿ ರೋಗ ನಿರೋಧಕ ಶಕ್ತಿ ಹೊಂದಿದೆ ಎಂದು ಹೇಳಿದರು. ಇಂಟಾನ್ ಬತ್ತಕ್ಕೆ ಬೇಗನೆ ಬೆಂಕಿ ರೋಗ ಹರಡುತ್ತದೆ. ಇದು ರೋಗ ನಿರೋಧಕ ಶಕ್ತಿ ಹೊಂದಿಲ್ಲ. ಇದರ ಬದಲು ಕೃಷಿಕರು ಬೆಂಕಿ ರೋಗ ನಿರೋಧಕ ತಳಿಗಳನ್ನು ಬಿತ್ತನೆ ಮಾಡಬೇಕು ಎಂದು ಹೇಳಿದರು.

ಇಡೀ ದೇಶದಲ್ಲಿಯೇ ಪೊನ್ನಂಪೇಟೆ ವಲಯ ಬತ್ತದ ಬೆಂಕಿ ರೋಗದ ಕೇಂದ್ರ ಎಂದು ಹಿಂದಿನಿಂದಲೂ ಸಾಬೀತಾಗಿದೆ. ಇಲ್ಲಿನ ಹವಾಗುಣ ಬೆಂಕಿ ರೋಗ ಹರಡಲು ಪೂರಕವಾಗಿದೆ. ಈ ಕಾರಣದಿಂದಲೇ ಪೊನ್ನಂಪೇಟೆಯಲ್ಲಿ ಬತ್ತದ ತಳಿ ಸುಧಾರಿಸುವ ಕೃಷಿ ಸಂಶೋಧನಾ ಕೇಂದ್ರ ಬಹಳ ಹಿಂದಿನಿಂದಲೇ ಕಾರ್ಯನಿರ್ವಹಿಸುತ್ತಿದೆ. ಕೃಷಿಕರು ಕೇಂದ್ರಕ್ಕೆ ಬಂದು ಸಲಹೆ ಸೂಚನೆ ಪಡದುಕೊಳ್ಳಬಹುದು ಎಂದು ಹೇಳಿದರು.

ಮಳೆ ಮತ್ತು ಬಿಸಿಲಿನ ಹವಾಗುಣದಲ್ಲಿ ಬೆಂಕಿರೋಗ ಬಹಳ ಬೇಗನೆ ಹರಡುತ್ತದೆ. ಈ ರೋಗ ಬಂದ ಬಳಿಕ ನಿಯಂತ್ರಿಸುವುದಕ್ಕಿಂತ ರೋಗ ನಿರೋಧಕ ಬತ್ತದ ತಳಿ ಕೃಷಿ ಮಾಡುವುದು ಒಳಿತು ಎಂದು ಹೇಳಿದರು.

ಕೆಪಿಆರ್-1, ಮತ್ತು ಕೆಪಿಆರ್-2  ತಳಿಯನ್ನು ಈಗಾಗಲೇ ಕೆ.ಆರ್.ನಗರ ಮುಂತಾದ ಕಡೆ ಉತ್ತಮವಾಗಿ ಬೆಳೆಯುತ್ತಿದ್ದಾರೆ. ಅಲ್ಲಿ ಒಂದು ಎಕರೆಗೆ 30 ರಿಂದ 32 ಕ್ವಿಂಟಲ್ ಇಳುವರಿ ಬರುತ್ತದೆ. ಕೊಡಗಿನಲ್ಲಿ 25 ಕ್ವಿಂಟಲ್ ಇಳುವರಿ ಪಡೆಯಬಹುದು. ಅಕ್ಕಿ ಸಣ್ಣದಾಗಿದ್ದು ರುಚಿಕರವಾಗಿದೆ. 130 ದಿನದಲ್ಲಿ ಕಟಾವಿಗೆ ಬರುತ್ತದೆ ಎಂದು ಹೇಳಿದರು.

ಕೃಷಿ ಸಂಶೋಧನಾ ಕೇಂದ್ರದಲ್ಲಿ 32 ಬಗೆಯ ಬತ್ತದ ತಳಿಗಳ ನಾಟಿ ಮಾಡಿ ಬೆಂಕಿ ರೋಗ ನಿರೋಧಕ ತಳಿಗಳ ಬಗ್ಗೆ ಮತ್ತಷ್ಟು ಅಧ್ಯಯನ ಮಾಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.