ADVERTISEMENT

ಮಳೆ ನಡುವೆ ಮತದಾನದ ಉತ್ಸಾಹ

ವಿಧಾನ ಪರಿಷತ್‌; ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರಕ್ಕೆ ನಡೆದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 11:16 IST
Last Updated 9 ಜೂನ್ 2018, 11:16 IST

ಮಡಿಕೇರಿ: ವಿಧಾನ ಪರಿಷತ್‌ನ ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನವು ಶುಕ್ರವಾರ ಕೊಡಗು ಜಿಲ್ಲೆಯಲ್ಲಿ ಶಾಂತಿಯುತವಾಗಿ ಮುಕ್ತಾಯವಾಯಿತು.

ಶಿಕ್ಷಕರ ಕ್ಷೇತ್ರದಲ್ಲಿ ಶೇ 83.44ರಷ್ಟು ಮತದಾನ ನಡೆದರೆ, ಪದವೀಧರ ಕ್ಷೇತ್ರದಲ್ಲಿ ಶೇ 74.83ರಷ್ಟು ಮತದಾನ ಆಗಿದೆ. ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಶಿಕ್ಷಕರ ಕ್ಷೇತ್ರದ ಮತಗಟ್ಟೆ ಸ್ಥಾಪಿಸಲಾಗಿತ್ತು. ನಗರಸಭೆ ಕಚೇರಿಯಲ್ಲಿ ಪದವೀಧರ ಕ್ಷೇತ್ರದ ಮತಗಟ್ಟೆ ಸ್ಥಾಪಿಸಲಾಗಿತ್ತು.

ಮಳೆಯು ನಡುವೆಯೂ ಮತದಾರರು ಉತ್ಸಾಹದಿಂದ ಹಕ್ಕು ಚಲಾಯಿಸಿದ್ದು ಕಂಡುಬಂತು. ಬೆಳಿಗ್ಗೆ 7ರಿಂದ ಸಂಜೆ 5ರ ತನಕ ಮತದಾನ ನಡೆಯಿತು.

ADVERTISEMENT

ಬೆಳಿಗ್ಗೆಯೇ ಕಾವೇರಿ ಕಲಾ ಕ್ಷೇತ್ರದ ಎದುರು ಸರದಿ ಸಾಲು ಕಂಡುಬಂತು. ಮಧ್ಯಾಹ್ನ ವೇಳೆ ಮಳೆ ಬಿರುಸು ಪಡೆದ ಕಾರಣ, ಮತದಾರರು ಹೊರ ಬರಲಿಲ್ಲ. ಮೂರು ಗಂಟೆಯ ಬಳಿಕ ಮತ್ತೆ ಮತದಾನ ಚುರುಕು ಪಡೆಯಿತು ಎಂದು ಮತಗಟ್ಟೆ ಸಿಬ್ಬಂದಿ ತಿಳಿಸಿದ್ದಾರೆ.

ಇದೇ 12ರಂದು ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಕೊಡಗು ಜಿಲ್ಲೆಯಲ್ಲಿ ಪದವೀಧರ ಕ್ಷೇತ್ರಕ್ಕೆ 1,633 ಹಾಗೂ ಶಿಕ್ಷಕರ ಕ್ಷೇತ್ರಕ್ಕೆ 1,250 ಮತದಾರರು ಇದ್ದರು. ಶಿಕ್ಷಕರ ಕ್ಷೇತ್ರದಲ್ಲಿ 1,043 ಮಂದಿ ಹಕ್ಕು ಚಲಾಯಿಸಿದರೆ, ಪದವೀಧರ ಕ್ಷೇತ್ರದಲ್ಲಿ 1,222 ಮಂದಿ ಹಕ್ಕು ಚಲಾಯಿಸಿದ್ದಾರೆ.

ಅಂಗಡಿ ಬಂದ್‌: ಮತಗಟ್ಟೆ ಕೇಂದ್ರ 200 ಮೀಟರ್‌ ಸುತ್ತ ನಿರ್ಬಂಧಿತ ಪ್ರದೇಶವೆಂದು ಘೋಷಿಸಿದ್ದ ಕಾರಣ ನಗರಸಭೆ ಮಳಿಗೆಗಳು ಬಾಗಿಲು ಮುಚ್ಚಿದ್ದವು. ಮೆಡಿಕಲ್‌, ಖಾಸಗಿ ಕ್ಲಿನಿಕ್‌ ಹಾಗೂ ಎಟಿಎಂ ಹೊರತು ಪಡಿಸಿದರೆ ಬೇಕರಿ, ಹೋಟೆಲ್‌, ಜೆರಾಕ್ಸ್‌ ಅಂಗಡಿಗಳು ಬಂದ್‌ ಆಗಿದ್ದವು.

ಬೆಳಿಗ್ಗೆ ನಿಧಾನ, ಸಂಜೆ ಚುರುಕು

ಸೋಮವಾರಪೇಟೆ: ಇಲ್ಲಿನ ಪಟ್ಟಣ ಪಂಚಾಯಿತಿಯ ಎರಡು ಮತಗಟ್ಟೆಯಲ್ಲಿ ವಿಧಾನಪರಿಷತ್‌ನ ನೈಋತ್ಯ ಪದವೀಧರರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಮತದಾನ ಬಿರುಸಿನಿಂದ ನಡೆಯಿತು.

ಪದವೀಧರ ಕ್ಷೇತ್ರಕ್ಕೆ ಶೇ76.44 ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಶೇ 85 ರಷ್ಟು ಮತದಾನವಾಗಿದೆ. ಬೆಳಿಗ್ಗೆಯಿಂದಲೇ  ಸುರಿಯುತ್ತಿದ್ದ ಮಳೆಯ ನಡುವೆಯೇ ಬಂದ ಮತದಾರರು ಮತಚಲಾಯಿಸಿದರು.  ಶಿಕ್ಷಕರಿಗೆ ರಜೆ ನೀಡದ ಪರಿಣಾಮ ಬೆಳಿಗ್ಗೆ ಮತದಾನ ನಿಧಾನವಾಗಿ ನಡೆಯಿತು. ನಂತರ ಊಟದ ಸಮಯದಲ್ಲಿ ಶಿಕ್ಷಕರು ಹಾಗೂ ಸರ್ಕಾರಿ ನೌಕರರು  ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹಕ್ಕು ಚಲಾಯಿಸಿದರು. ಮಧ್ಯಾಹ್ನದ ಎರಡು ಗಂಟೆ ವರೆಗೆ ಶೇ50ರಷ್ಟು ಮತದಾನವಾಗಿತ್ತು.

ಮಾಜಿ ಸಚಿವ ಬಿ.ಎ.ಜೀವಿಜಯ, ಕಾಂಗ್ರೆಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಚಂಗಪ್ಪ, ಬಿಜೆಪಿ ಜಿಲ್ಲಾ ಘಟಕದ ವಕ್ತಾರ ಎಂ.ಬಿ.ಅಭಿಮನ್ಯುಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಬಿ. ಸತೀಶ್, ಎಪಿಎಂಸಿ ಸದಸ್ಯ ಸಿ.ಎಸ್.ನಾಗರಾಜ್, ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಘಟಕದ ರಾಜ್ಯ ಸಂಚಾಲಕ ಬಿ.ಈ. .ಜಯೇಂದ್ರ ಸೇರಿದಂತೆ ಮತ್ತಿತರ ಪ್ರಮುಖರು ಮತದಾನ ಮಾಡಿದರು.

ಬಿಜೆಪಿಯ ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್,ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಕೆ.ಎಂ.ಆದಂ, ಬ್ಲಾಕ್ ಕಾಂಗ್ರೆಸ್‌ ಕೆ.ಎಂ.ಲೋಕೇಶ್, ಮತ್ತಿತರರು ಮತ ಕೇಂದ್ರದ ಎದುರು ಮತ ಯಾಚಿಸಿದರು. ಪಟ್ಟಣದ ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.