ADVERTISEMENT

ಮಹಿಳಾ ಕಾಲೇಜಿಗೆ ಕೊನೆಗೂ ಸಿಕ್ಕಿತು ಜಾಗ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 6:11 IST
Last Updated 4 ಡಿಸೆಂಬರ್ 2017, 6:11 IST
ಜಿಲ್ಲಾ ಯುವ ಒಕ್ಕೂಟಕ್ಕೆ ಸೇರಿದ ಯುವ ಭವನ ಕಟ್ಟಡದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು
ಜಿಲ್ಲಾ ಯುವ ಒಕ್ಕೂಟಕ್ಕೆ ಸೇರಿದ ಯುವ ಭವನ ಕಟ್ಟಡದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು   

ಮಡಿಕೇರಿ: ಸ್ವಂತ ಕಟ್ಟಡ ಇಲ್ಲದೆ, ನಗರದ ಯುವ ಭವನ ಕಟ್ಟಡದಲ್ಲಿ ನಡೆಯುತ್ತಿದ್ದ ಜಿಲ್ಲೆಯ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿಗೆ ಇದೀಗ ನೂತನ ಕಟ್ಟಡ ನಿರ್ಮಿಸಲು ಜಾಗ ದೊರಕಿದ್ದು, ಈ ನಿಟ್ಟಿನಲ್ಲಿ ಕಾಲೇಜು ಆಡಳಿತ ಮಂಡಳಿ ಶೀಘ್ರ ಕಾಮಗಾರಿ ಆರಂಭಿಸುವ ನಿರೀಕ್ಷೆಯಲ್ಲಿದೆ.

ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕೆಂದು ಜಾಗ ಗುರುತಿಸುವಂತೆ ಕೆಲವು ತಿಂಗಳುಗಳ ಹಿಂದೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರು ಸೂಚಿಸಿದ್ದರು. ಇದರಿಂದ ತಾಲ್ಲೂಕಿನ ಕರ್ಣಂಗೇರಿ ಗ್ರಾಮದಲ್ಲಿ 2 ಎಕರೆ ಜಾಗ ದೊರಕಿದ್ದು, ಜಾಗವನ್ನು ಬೆಂಗಳೂರು ಕಾಲೇಜಿನ ಶಿಕ್ಷಣ ಇಲಾಖೆಯ ಆಯುಕ್ತರ ಹೆಸರಿಗೆ ಕಾಯ್ದಿರಿಸಿದೆ. ಈ ಸಂಬಂಧ ಆಡಳಿತ ಮಂಡಳಿ ಕಾರ್ಯೋನ್ಮುಖವಾಗಿದೆ.

2014–15ನೇ ಸಾಲಿನಲ್ಲಿ ನಗರದಲ್ಲಿ ಹೊಸದಾಗಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಆರಂಭಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಿತ್ತು, ಆದರೆ, ಸೂಕ್ತ ಜಾಗ ಸಿಗದ ಹಿನ್ನೆಲೆಯಲ್ಲಿ ಕಾಲೇಜು ಆರಂಭವಾದರೂ ಜಿಲ್ಲಾ ಯುವ ಒಕ್ಕೂಟಕ್ಕೆ ಸೇರಿದ ಯುವ ಭವನ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿತ್ತು.

ADVERTISEMENT

ಈ ಸಂಬಂಧ ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರ ₹ 2 ಕೋಟಿ ಹಣವನ್ನು ಬಿಡುಗಡೆ ಮಾಡಿತ್ತು. ಆರಂಭದ ದಿನಗಳಲ್ಲಿ ನಗರದ ಪದವಿಪೂರ್ವ ಕಾಲೇಜಿನ ಬಳಿ ಸುಸಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂಬ ಮಾತುಗಳು ಕೇಳಿ ಬಂದರೂ, ಅದು ಕಾರ್ಯರೂಪಕ್ಕೆ ಬರಲಿಲ್ಲ. ಇದರಿಂದಾಗಿ ಕಿರಿದಾದ ಯುವಭವನದ ಕಟ್ಟಡದಲ್ಲಿಯೇ ವಿದ್ಯಾರ್ಥಿನಿಯರು ವಿದ್ಯಾರ್ಜನೆ ಮಾಡಬೇಕಿದೆ ಎಂಬ ದೂರುಗಳು ಮಕ್ಕಳ ಪೋಷಕರಿಂದ ಕೇಳಿ ಬರುತ್ತಿತ್ತು.

ಈ ನಡುವೆ ಯುವ ಭವನವನ್ನು ಜಿಲ್ಲಾ ಯುವ ಒಕ್ಕೂಟಕ್ಕೆ ಬಿಟ್ಟು ಕೊಡುವಂತೆ ಯುವ ಒಕ್ಕೂಟ ಹಲವು ಬಾರಿ ಕಾಲೇಜಿಗೆ ಮನವಿ ಮಾಡಿತ್ತು. ಆದರೆ, ಕಾಲೇಜಿಗೆ ಬೇರೆ ಕಟ್ಟಡ ಸಿಗದ ಕಾರಣ ಕಾಲೇಜು ಆಡಳಿತ ಮಂಡಳಿ ಅತಂತ್ರ ಸ್ಥಿತಿಗೆ ತಲುಪಿತ್ತು. ಯುವಭವನ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಯೊಂದಿಗೆ ಕೂಡ ಹಲವು ಬಾರಿ ಒಕ್ಕೂಟ ಮನವಿ ಮಾಡಿಕೊಂಡಿತ್ತು.

ದಾಖಲಾತಿ ಏರಿಕೆಯ ನಿರೀಕ್ಷೆ: ‘ಪ್ರಸ್ತುತ ವರ್ಷದಲ್ಲಿ ಕಾಲೇಜಿನ ಕಲಾ ವಿಭಾಗದಲ್ಲಿ ಒಟ್ಟು 41 ಹಾಗೂ ವಾಣಿಜ್ಯ ವಿಭಾಗದಲ್ಲಿ 95 ವಿದ್ಯಾರ್ಥಿಗಳು ಇದ್ದಾರೆ. ಸೂಕ್ತ ಕಟ್ಟಡ ಆಗುವುದರಿಂದ ವಿದ್ಯಾರ್ಥಿನಿಯರ ದಾಖಲಾತಿ ಪ್ರಮಾಣವೂ ಏರಿಕೆಯಾಗಲಿದೆ. ಕಾಲೇಜಿಗೆ ಕಟ್ಟಡ ಕಟ್ಟಲು ಜಾಗ ದೊರಕಿರುವುದು ಸಂತಸ ತಂದಿದೆ. 4 ವರ್ಷಗಳ ಕಾಲ ಯುವಭವನದ ಕಟ್ಟಡದಲ್ಲಿ ಕೆಲಸ ನಿರ್ವಹಿಸಿದ್ದೇವೆ. ಇನ್ನೆರಡು ವರ್ಷದಲ್ಲಿ ಹೊಸ ಕಟ್ಟಡ ಕಾರ್ಯರಂಭ ಮಾಡುವ ನಿರೀಕ್ಷೆ ಇದೆ’ ಎನ್ನುತ್ತಾರೆ ಕಾಲೇಜು ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಿ.ಜೆ.ಜವರಪ್ಪ.

6ರ ಒಳಗೆ ಕಟ್ಟಡ ಹಸ್ತಾಂತರಿಸಲು ಗಡುವು
ಕಾಲೇಜಿಗೆ ಯುವ ಭವನ ಕಟ್ಟಡ ಬಿಟ್ಟುಕೊಟ್ಟು, ಒಕ್ಕೂಟದ ಹಲವರು ಕೆಲಸ ಕಾರ್ಯಗಳಿಗೆ ತೊಡಕಾಗಿದೆ. ಕಟ್ಟಡ ಹಸ್ತಾಂತರಿಸುವಂತೆ ಕಾಲೇಜು ಆಡಳಿತ ಮಂಡಳಿಯೊಂದಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಇದುವರೆಗೂ ಸೂಕ್ತ ಸ್ಪಂದನೆ ದೊರೆತ್ತಿಲ್ಲ. ಡಿ.6ರೊಳಗೆ ಕಟ್ಟಡವನ್ನು ಹಸ್ತಾಂತರ ಪ್ರಕ್ರಿಯೆ ಮಾಡದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಜಿಲ್ಲಾ ಯುವ ಒಕ್ಕೂಟ ಜಿಲ್ಲಾಧ್ಯಕ್ಷ ಬಿ.ಜೋಯಪ್ಪ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.