ADVERTISEMENT

ಮಾತೃ ಭಾಷೆಯಿಂದ ಭವಿಷ್ಯಕ್ಕೆ ಅಡ್ಡಿಯಾಗದು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 9:40 IST
Last Updated 6 ಅಕ್ಟೋಬರ್ 2012, 9:40 IST

ನಾಪೋಕ್ಲು: ಇತರ ಭಾಷೆಗಳನ್ನು ಜ್ಞಾನ ಸಂಪಾದನೆಗಾಗಿ ಕಲಿತುಕೊಂಡರೆ, ಭವಿಷ್ಯ ರೂಪಿಸಿಕೊಳ್ಳಲು ಮಾತೃ ಭಾಷೆ ಕನ್ನಡವೇ ಅವಶ್ಯಕ. ಎಂದಿಗೂ ಭವಿಷ್ಯಕ್ಕೆ ಮಾತೃ ಭಾಷೆ ಅಡ್ಡಿ ಬರುವುದಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಅಭಿಪ್ರಾಯಪಟ್ಟರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕಸಾಪ ಮುರ್ನಾಡು ಹೋಬಳಿ ಘಟಕ ಹಾಗೂ ಮುರ್ನಾಡು ಮಾರುತಿ ಮಹಿಳಾ ಸಂಯುಕ್ತ ಮತ್ತು ಮರಗೋಡು ಭಾರತೀ ಪದವಿ ಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಮುರ್ನಾಡು ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಡಿನ ಜನರು ಕನ್ನಡ ಭಾಷೆಗೆ ಪ್ರಥಮ ಪ್ರಾಶಸ್ತ್ಯ ನೀಡಿ, ಇತರ ಭಾಷೆಗಳನ್ನು ಸಹ ಕಲಿಯಿರಿ, ಆದರೆ ಕನ್ನಡ ಭಾಷೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಎಲ್ಲರೂ ಪ್ರಯತ್ನಿಸಬೇಕು ಎಂದರು. 

 ರಾಜ್ಯದ 11 ಜಿಲ್ಲೆಗಳಲ್ಲಿ ಕನ್ನಡ ಭಾಷೆಯನ್ನು ಪೂರ್ಣವಾಗಿ ಬಳಸಲಾಗುತ್ತದೆ. ಇತರೆ 19 ಜಿಲ್ಲೆಗಳಲ್ಲಿ ಎರಡು ಮೂರು ಭಾಷೆಗಳನ್ನು ಮಾತನಾಡುತ್ತಾರೆ. ತಮ್ಮ ಪ್ರಾಂತೀಯ ಭಾಷೆಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ನಾಡಿನ ಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದರು.

 ಕಡ್ಡಾಯವಾಗಿ ಒಂದರಿಂದ 5ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು. ಆಡಳಿತದಲ್ಲಿ ಕನ್ನಡ ಜಾರಿ ಕಡ್ಡಾಯವಾಗಿ ಆಗಬೇಕು ಎಂದು ಹೇಳಿದರು.

 ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಭಾಷಾ ಬೆಳವಣಿಗೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಕನ್ನಡ ಭಾಷೆಯಲ್ಲಿ ಅಧಿಕ ಅಂಕ ಗಳಿಸಿದವರಿಗೆ ಪ್ರೋತ್ಸಾಹ ನೀಡುತ್ತಿದೆ. ಗಡಿ ಪ್ರದೇಶದಲ್ಲಿ ಜಾಗೃತಿ ಹೀಗೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಾಗಿದೆ ಎಂದರು.

ಲೇಖಕ ಕಾ.ತ.ಚಿಕ್ಕಣ್ಣ ಅವರು ಮಾತನಾಡಿ, ಕನ್ನಡ ಭಾಷೆ ಸಾಹಿತ್ಯ, ಸಂಸ್ಕೃತಿ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ಮಾಡಬೇಕು. ಮಾತೃ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದರು. ಕನ್ನಡ ಪ್ರಾಧ್ಯಾಪಕರಾದ ಡಾ.ಎಂ.ಪಿ.ರೇಖಾ ಕನ್ನಡ ಭಾಷೆ ಉಳಿವು ಹಾಗೂ ಕನ್ನಡ ಪರಿಸರ ನಾವು-ನೀವು ಕುರಿತು ಉಪನ್ಯಾಸ ನೀಡಿದರು. ಕಸಾಪ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷ ಡಾ.ಸುಭಾಷ್ ನಾಣಯ್ಯ ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿಡಾ.ಎನ್.ಶಿವಶಂಕರ, ಮೂರ್ನಾಡು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ.ಎಂ.ಸರಸ್ವತಿ, ಮಾರುತಿ ಮಹಿಳಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಣಿ ಅಪ್ಪಯ್ಯ, ಕ ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಇಂದಿರಮ್ಮ, ಮಣಜೂರು ಮಂಜುನಾಥ್, ಮುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಕೇಶವ ಮತ್ತಿತರರು ಇದ್ದರು. 

 ಕಸಾಪ ಮುರ್ನಾಡು ಹೋಬಳಿ ಘಟಕದ ಗೌರವ ಕಾರ್ಯದರ್ಶಿ ಹಾಗೂ ಉಪನ್ಯಾಸಕ ಪಿ.ಮಹದೇವ ಸ್ವಾಮಿ ಸ್ವಾಗತಿಸಿದರು. ಮಮತಾ ರಾವ್ ಮತ್ತು ತಂಡದವರು ನಾಡಗೀತೆ ಹಾಡಿದರು. ಮೂರ್ನಾಡು ಮೈದಾನದಿಂದ ಪ್ರಮುಖ ರಸ್ತೆ ಮೂಲಕ ಮೆರವಣಿಗೆ ನಡೆಯಿತು.


`ಕನ್ನಡ ಮಾಧ್ಯಮ-ಮೀಸಲು ಜಾರಿಯಾಗಲಿ~
ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ದೊರೆಯಲು ಮೀಸಲಾತಿ ಜಾರಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಪ್ಪಚ್ಚು ರಂಜನ್ ಹೇಳಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಎಲ್ಲಾ ರಾಷ್ಟ್ರಗಳಿಗೂ ಕಾಲಿಡುತ್ತಿವೆ. ಇಂತಹ ಸಂದರ್ಭದಲ್ಲಿ ಆಯಾ ಪ್ರಾಂತೀಯ ಭಾಷೆಗಳನ್ನು ಉಳಿಸಿ-ಬೆಳೆಸಲು ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದರು.

ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಭಾಷೆ ಉಳಿದರೆ ಸಂಸ್ಕೃತಿ ಉಳಿಯಲು ಸಾಧ್ಯ. ಮಾತೃ ಭಾಷೆಗೆ ಹೆಚ್ಚು ಒತ್ತನ್ನು ನೀಡಬೇಕು.

ಕನ್ನಡ ಭಾಷೆ, ಸಂಸ್ಕೃತಿ ಆಚಾರ-ವಿಚಾರ, ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವುದರ ಜೊತೆಗೆ ರಾಜ್ಯದ ಹಿತ ರಕ್ಷಣೆ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT