ADVERTISEMENT

ರಾಜಕಾರಣಿಗಳನ್ನು ನಂಬುವುದಿಲ್ಲ: ನಾರಿಮನ್

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 6:17 IST
Last Updated 26 ಡಿಸೆಂಬರ್ 2012, 6:17 IST

ಮಡಿಕೇರಿ: ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ರಾಷ್ಟ್ರೀಯ ರಾಜಕೀಯ ಪಕ್ಷಗಳ ಮುಖಂಡರು ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಒಂದೊಂದು ರಾಜ್ಯದಲ್ಲಿ ಒಂದು ರೀತಿಯ ಹೇಳಿಕೆ ನೀಡುತ್ತಾರೆ. ಅದಕ್ಕಾಗಿ ನಾನು ರಾಜಕಾರಣಿಗಳನ್ನು ನಂಬುವುದಿಲ್ಲ...

ಇದು ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ರಾಜ್ಯದ ಪರ ವಕಾಲತ್ತು ನಡೆಸುತ್ತಿರುವ ಹಿರಿಯ ವಕೀಲ ಫಾಲಿ ನಾರಿಮನ್ ಅವರ ಬಿಚ್ಚು ಮಾತು.

ಇಲ್ಲಿನ ವಿಧಾನಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಅವರ ನಿವಾಸಕ್ಕೆ ಮಂಗಳವಾರ ಪತ್ನಿ ಸಮೇತರಾಗಿ ಭೇಟಿ ನೀಡಿದಾಗ ನಾರಿಮನ್ ಸುದ್ದಿಗಾರರ ಜೊತೆ ಮಾತನಾಡಿದರು.

ಕಾವೇರಿ ನದಿ ನೀರು ಹಂಚಿಕೆ ಕುರಿತಾದ ಪ್ರಕರಣದಲ್ಲಿ ಕರ್ನಾಟಕದಲ್ಲಿ ಹಾಗೂ ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳ ನಾಯಕರು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಾರೆ ಎಂದು ಹೇಳಿದರು.
ಕರ್ನಾಟಕದ ಕಾಂಗ್ರೆಸ್ ಮುಖಂಡರು ಹಾಗೂ ತಮಿಳುನಾಡಿನ ಕಾಂಗ್ರೆಸ್ ಮುಖಂಡರು ನದಿ ನೀರು ಹಂಚಿಕೆ ಕುರಿತಂತೆ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಬಿಜೆಪಿ ಸ್ಥಿತಿಯೂ ಹೀಗೆ ಆಗಿದೆ. ಒಂದೇ ರಾಜಕೀಯ ಪಕ್ಷವಾಗಿದ್ದರೂ ವಿಭಿನ್ನ ನಿಲುವು ವ್ಯಕ್ತಪಡಿಸಿದಾಗ ಸಮಸ್ಯೆಗಳ ಪರಿಹಾರ ಕಷ್ಟಸಾಧ್ಯ ಎಂದರು.

ಈ ಸಮಸ್ಯೆ ಇತ್ಯರ್ಥಪಡಿಸಲು ಎರಡೂ ರಾಜ್ಯಗಳಲ್ಲಿ ರಾಜಕೀಯ ಮುಖಂಡರು ಹಾಗೂ ರೈತರಲ್ಲಿ ಸಕಾರಾತ್ಮಕ ಭಾವನೆಗಳು ಇರಬೇಕು. ದುರದೃಷ್ಟವಶಾತ್ ಇದು ಕಾಣುತ್ತಿಲ್ಲ ಎಂದು ಅವರು ವಿಷಾದಿಸಿದರು.

ಸೌಹಾರ್ದಯುತ ಮಾತುಕತೆ ಮೂಲಕ ಪ್ರಯತ್ನಿಸಿದರೆ ಸಮಸ್ಯೆಗೆ ಬೇಗನೇ ಪರಿಹಾರ ಕಂಡುಕೊಳ್ಳಲು ಸಾಧ್ಯ. ಕಾನೂನು ಮೂಲಕವಾದರೆ ಪರಿಹಾರ ವಿಳಂಬವಾಗುವ ಸಾಧ್ಯತೆ ಇರುತ್ತದೆ ಎಂದರು.

2ನೇ ಬಾರಿ ಭೇಟಿ: ಕೊಡಗಿಗೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ. ಕೊಡಗಿಗೆ ಪ್ರವಾಸ ಕೈಗೊಳ್ಳುವುದು ಖುಷಿಯಾಗುತ್ತದೆ. ಕೊಡವ ಹಾಗೂ ಪಾರ್ಸಿ ಜನಾಂಗದಲ್ಲಿ ಸಾಕಷ್ಟು ಸಾಮ್ಯತೆಗಳಿವೆ. ಕೊಡವರಂತೆ ನಾವು (ಪಾರ್ಸಿ ಜನಾಂಗ) ಕೂಡ ಬದುಕನ್ನು ಆಸ್ವಾದಿಸುತ್ತೇವೆ ಎಂದು ಹೇಳಿದರು.

ಫಾಲಿ ನಾರಿಮನ್ ಅವರ ಪತ್ನಿ ಬಾಪ್ಸಿ ನಾರಿಮನ್, ವಿಧಾನಪರಿಷತ್ ಸದಸ್ಯ ಎಂ.ಸಿ. ನಾಣಯ್ಯ, ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ, ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.