ADVERTISEMENT

ರಾಜಾಸೀಟ್‌: ಚಿಮ್ಮದ ‘ಸಂಗೀತ ಕಾರಂಜಿ’

ಅದಿತ್ಯ ಕೆ.ಎ.
Published 16 ಅಕ್ಟೋಬರ್ 2017, 7:29 IST
Last Updated 16 ಅಕ್ಟೋಬರ್ 2017, 7:29 IST

ಮಡಿಕೇರಿ: ಅಲ್ಲಿಗೆ ನಿತ್ಯವೂ ಸಾವಿರಾರು ಪ್ರವಾಸಿಗರು ಭೇಟಿ ಕೊಡುತ್ತಾರೆ. ವಾರಾಂತ್ಯ, ಸಾಲು ಸಾಲು ರಜೆ ವೇಳೆಯಂತೂ ಕೇಳುವುದೇ ಬೇಡ; ಆ ಪ್ರದೇಶ ಪ್ರವಾಸಿಗರಿಂದಲೇ ಗಿಜಿಗುಡುತ್ತಿರುತ್ತದೆ. ಒತ್ತಡದ ಬದುಕು, ನಗರ ಜೀವನ, ವಾಹನ ದಟ್ಟಣೆಯಿಂದ ಮುಕ್ತಿ ಪಡೆಯಲು ಪ್ರಕೃತಿ ಮಡಿಲಿಗೆ ಬರುವ ಪ್ರವಾಸಿಗರಿಗೆ ನಿತ್ಯವೂ ನಿರಾಸೆ ಕಾಡುತ್ತಲೇ ಇದೆ. ಅದಕ್ಕೆ ಕಾರಣ ಕೊಡಗಿನ ಪ್ರಮುಖ, ಹೃದಯಭಾಗದಲ್ಲಿರುವ ಪ್ರವಾಸಿ ತಾಣಗಳಲ್ಲೂ ಸೌಲಭ್ಯದ ಕೊರತೆ!

ಹೌದು, ಮಡಿಕೇರಿಯೆಂದರೆ ಮೊದಲು ನೆನಪಾಗೋದು ರಾಜಾಸೀಟ್‌. ಒಂದುಕಾಲದಲ್ಲಿ ರಾಜಾಸೀಟ್‌ನಲ್ಲಿ ನಿಂತರೆಸಾಕು ಇಡೀ ಕೊಡಗಿನ ಪ್ರಕೃತಿಯ ಸೊಬಗೇ ಕಣ್ಮುಂದೆ ಬರುತ್ತಿತ್ತು; ಪ್ರವಾಸಿಗರು ಹಿತಾನುಭವಗಳೊಂದಿಗೆ ಮರಳುತ್ತಿದ್ದರು. ಆದರೆ, ಈಗ ಅಲ್ಲಿ ನಿಂತು ವೀಕ್ಷಿಸಿದರೆ ಹೋಂಸ್ಟೇಗಳೇ ಕಣ್ಣಿಗೆ ಬೀಳುತ್ತವೆ...

ಅಷ್ಟು ಮಾತ್ರವಲ್ಲ; ತೋಟಗಾರಿಕೆ ಇಲಾಖೆ ನಿರ್ವಹಣೆ ಮಾಡುವ ‘ಸಂಗೀತ ಕಾರಂಜಿ’ ಕೆಟ್ಟುನಿಂತು ಒಂದೂವರೆ ವರ್ಷವಾದರೂ ‘ದುರಸ್ತಿ ಭಾಗ್ಯ’ ಕಂಡಿಲ್ಲ. ಕಾರಂಜಿಯಲ್ಲಿ ನೀರು, ಬೆಳಕಿನಾಟ ಸವಿಯಲು ಬರುವ ಪ್ರವಾಸಿಗರಿಗೆ ನಿರಾಸೆ ಕಾಡುತ್ತಿದೆ

ADVERTISEMENT

ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಪದೇಪದೇ ಸಭೆ ನಡೆಸಿ ದುರಸ್ತಿಗೆ ಸೂಚನೆ ಕೊಟ್ಟರೂ ಅದಕ್ಕೆ ಸಂಬಂಧಿಸಿದ ಅನುದಾನ ಮಾತ್ರ ಖಾತೆಯಲ್ಲಿ ಕೊಳೆಯುತ್ತಿದೆ. ‘ಮಡಿಕೇರಿ ಜನೋತ್ಸವ’ಕ್ಕೂ ಮೊದಲೇ ಕಾರಂಜಿಯನ್ನು ದುರಸ್ತಿ ಮಾಡಬೇಕು.

ಸಸ್ಯಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕೆಂದು ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಆದೇಶಿಸಿದ್ದರು. ಆದರೆ, ದಸರಾ ಕಳೆದು ಹದಿನೈದು ದಿನವಾದರೂ ಅಧಿಕಾರಿಗಳು ಅತ್ತಸುಳಿದಿಲ್ಲ. ಕಳೆದ ಶುಕ್ರವಾರ ಜಿಲ್ಲಾಧಿಕಾರಿಯೇ ಖುದ್ದು ಸ್ಥಳ ಪರಿಶೀಲನೆ ನಡೆಸಿ, ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

2016ರ ಆರಂಭದಲ್ಲಿ ಕಾರಂಜಿ ಚೆನ್ನಾಗಿತ್ತು; ಸಂಜೆ ವೇಳೆ ಕಾರಂಜಿಯ ವೈಯ್ಯಾರ ನೋಡಲು ನೂರಾರು ಪ್ರವಾಸಿಗರು ತುದಿಗಾಲಲ್ಲಿ ನಿಂತಿರುತ್ತಿದ್ದರು. ಈಗ ಸಂಜೆ ಆಗುತ್ತಿದ್ದಂತೆಯೇ ರಾಜಾಸೀಟ್‌ ಭಣಗುಡಲು ಆರಂಭಿಸುತ್ತದೆ ಎಂದು ಕಾವಲುಗಾರರೇ ಅಲವತ್ತುಕೊಳ್ಳುತ್ತಾರೆ.

ಬರೀ ನಿರಾಸೆ...: ಹಣದಾಸೆಗೆ ಮಕ್ಕಳ ರೈಲು ಮಾತ್ರ ಓಡುತ್ತಿದೆ. ಪಳಯುಳಿಕೆಯಂತಿದ್ದರೂ ಮುಂದೆ ಸಾಗುತ್ತಿದೆ. ರೈಲಿನಿಂದ ಮಕ್ಕಳು ಇಳಿದ ಬಳಿಕ ಇಷ್ಟೇನಾ ಎಂದು ಗೊಣಗುತ್ತಾರೆ. ನಗರಸಭೆ ವತಿಯಿಂದ ಈಚೆಗೆ ಮಕ್ಕಳ ಉದ್ಯಾನವನ್ನು ಮಾತ್ರ ಅಭಿವೃದ್ಧಿಗೊಳಿಸಲಾಯಿತು. ಅದರ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.

ಸಂಚಾರದ ಕಿರಿಕಿರಿ: ವಾರಾಂತ್ಯದಲ್ಲಿ ಮಡಿಕೇರಿಯಲ್ಲಿ ಸಂಚಾರ ಕಿರಿಕಿರಿ ಸಾಮಾನ್ಯವಾಗಿದೆ. ಅದರಲ್ಲೂ ರಾಜಾಸೀಟ್‌ ರಸ್ತೆಯಲ್ಲಿ ತೆರಳುವುದೇ ಸಾಹಸ. ನಗರಸಭೆ ಲಕ್ಷಾಂತರ ರೂಪಾಯಿಗೆ ಪಾರ್ಕಿಂಗ್‌ ಸ್ಥಳವನ್ನು ಗುತ್ತಿಗೆಗೆ ನೀಡಿದೆ. ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದರೂ ಪ್ರವಾಸಿಗರಿಂದ ಶುಲ್ಕ ಪಡೆದುಕೊಳ್ಳಲಾಗುತ್ತಿದೆ.

ವಾಹನಗಳಿಗೆ ನಿಗದಿತ ಜಾಗ ನೀಡಿದ್ದರೂ ವಾಹನಗಳೂ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿವಾಸದವರೆಗೂ ಸಾಲುಗಟ್ಟಿ ನಿಂತಿರುತ್ತವೆ. ಸ್ಟೋನ್‌ ಹಿಲ್‌ ರಸ್ತೆಯಲ್ಲೂ ಪ್ರವಾಸಿಗರ ವಾಹನಗಳ ಕಿರಿಕಿರಿ ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.