ADVERTISEMENT

ವೈದ್ಯರು, ಸಿಬ್ಬಂದಿ ಕೊರತೆ: ರೋಗಿಗಳ ಪರದಾಟ

ಸರ್ಕಾರಿ ಆಸ್ಪತ್ರೆಗೆ ಬೇಕಿದೆ `ಚಿಕಿತ್ಸೆ'

ಪ್ರಜಾವಾಣಿ ವಿಶೇಷ
Published 22 ಜುಲೈ 2013, 6:31 IST
Last Updated 22 ಜುಲೈ 2013, 6:31 IST
ಕುಶಾಲನಗರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ.
ಕುಶಾಲನಗರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ.   

ಕುಶಾಲನಗರ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಅಗತ್ಯ ಸಿಬ್ಬಂದಿ ಇಲ್ಲ, ಡಿ ದರ್ಜೆ ನೌಕರರೂ ಇಲ್ಲ, ಕುಡಿಯುವ ನೀರು- ಸ್ವಚ್ಛತೆ- ಔಷಧಿ ಯಾವುದೂ ತೃಪ್ತಿಕರವಾಗಿಲ್ಲ. ಹಾಗಾಗಿ ಇದನ್ನು `ಇಲ್ಲ'ಗಳ ಆಸ್ಪತ್ರೆ ಎನ್ನಬಹುದು.

ಹೌದು. ಕುಶಾಲನಗರ ಸಮುದಯ ಆರೋಗ್ಯ ಕೇಂದ್ರಕ್ಕೆ ಕಾಲಿಟ್ಟರೆ ಇಲ್ಲಿನ ಅವ್ಯವಸ್ಥೆ ನಿಮ್ಮ ಕಣ್ಣಿಗೆ ರಾಚುತ್ತದೆ. ಇದು ಹೋಬಳಿ ಕೇಂದ್ರವಾದರೂ ಇರುವುದು ಕೇವಲ ಮೂವರು ತಜ್ಞ ವೈದ್ಯರು. ಇವರಲ್ಲಿ ಒಬ್ಬರು ಅನಾರೋಗ್ಯದ ಕಾರಣದಿಂದ ರಜೆ ಹಾಕಿ ಎರಡು ತಿಂಗಳಾಗಿದೆ. ಪ್ರತಿದಿನ ಇಲ್ಲಿಗೆ 250 ರಿಂದ 300 ಹೊರ ರೋಗಿಗಳು ಚಿಕಿತ್ಸೆ ಬಯಸಿ ಬರುತ್ತಾರೆ. ಪ್ರತಿದಿನ 20 ರಿಂದ 25 ಒಳರೋಗಿಗಳು ಇರುತ್ತಾರೆ. ಇಷ್ಟೆಲ್ಲ ರೋಗಿಗಳಿಗೆ ಚಿಕಿತ್ಸೆ ನೀಡಲು ಇರುವುದು ಇಬ್ಬರೇ ವೈದ್ಯರು!

ಇರುವ ಇಬ್ಬರು ವೈದ್ಯರಲ್ಲಿ ಒಬ್ಬರು ಬೆಳಿಗ್ಗೆ 9ಕ್ಕೆ ಕರ್ತವ್ಯಕ್ಕೆ ಹಾಜರಾದರೆ ರಾತ್ರಿ ಪಾಳೆಯಲ್ಲೂ ಅವರೇ ಇರಬೇಕಾದ ಸ್ಥಿತಿ. ಹೀಗಿರುವಾಗ ಇವರಿಂದ ಎಷ್ಟರ ಮಟ್ಟಿಗೆ ಉತ್ತಮ ಚಿಕಿತ್ಸೆ ನಿರೀಕ್ಷಿಸಬಹುದು ಎಂಬುದು ರೋಗಿಗಳ ಪ್ರಶ್ನೆ.

ಆಸ್ಪತ್ರೆಯಲ್ಲಿ ಕನಿಷ್ಠ ಮೂಲ ಸೌಲ್ಯಗಳಿಲ್ಲ. ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿದೆ. ರೋಗಿಗಳು ಹಾಗೂ ಸಿಬ್ಬಂದಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಒಳರೋಗಿಗಳು ಕೂಡ ಹೋಟೆಲ್‌ಗಳಿಂದಲೇ ನೀರು ಪಡೆದು ಕುಡಿಯಬೇಕಾಗಿದೆ. ಕುಡಿಯುವ ನೀರಿಗಾಗಿ ಇದ್ದ ಒಂದು ಫೊಲ್ಟರ್ ಕೆಟ್ಟುಹೋಗಿ ಯಾವ ಕಾಲವಾಯಿತೋ?

ಶೌಚಾಲಯಗಳಿವೆ. ಆದರೆ, ನಿರ್ವಹಣೆ ಮಾಡುವ ಸಿಬ್ಬಂದಿ ಇಲ್ಲ. ಕುಡಿಯುವುದಕ್ಕೇ ನೀರಿಲ್ಲ; ಶೌಚಾಲಯಕ್ಕೆ ಎಲ್ಲಿಂದ ತರುವುದು ಎಂಬುದು ರೋಗಿಗಳನ್ನು ಕಾಡುತ್ತಿರುವ ಪ್ರಶ್ನೆ. ಹೀಗಾಗಿ ಇಲ್ಲಿನ ಸಿಬ್ಬಂದಿ ಹಾಗೂ ರೋಗಿಗಳು ಬಯಲು ಶೌಚಾಲಯವನ್ನೇ ಆಶ್ರಯಿಸುವ ಗತಿ ಬಂದಿದೆ.

ಆಸ್ಪತ್ರೆಯ ಹಿಂದೆ ಮುಂದೆ ಗಿಡಗಂಟಿಗಳು ಬೆಳೆದು ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಪಟ್ಟಿದೆ. ಇನ್ನು ಒಳರೋಗಿಗಳು ಮಲಗುವ ಕೋಣೆಗಳ ಹಲವಾರು ಕಿಟಕಿ ಗಾಜುಗಳು ಒಡೆದಿವೆ. ಸೊಳ್ಳೆ, ತಿಗಣೆ, ಕ್ರಿಮಿ-ಕೀಟಗಳ ಕಾಟ ವಿಪರೀತವಾಗಿದೆ.

ಈ ಎಲ್ಲ ಸಮಸ್ಯೆಗಳಿಂದಾಗಿ ಈ ಸಮುದಾಯ ಆರೋಗ್ಯ ಕೇಂದ್ರವೇ ರೋಗಗ್ರಸ್ಥವಾಗಿದೆ. ಈ ಭಾಗದ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಇತ್ತ ಯಾವಾಗ ಗಮನಹರಿಸುತ್ತಾರೋ? ನಮ್ಮ ಸಮಸ್ಯೆಗಳು ಯಾವಾಗ ನೀಗುತ್ತವೆಯೋ ಎಂದು ರೋಗಿಗಳು ಕಾಯುತ್ತಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.