ADVERTISEMENT

ಶನಿವಾರಸಂತೆ ಅಂಚೆ ಕಚೇರಿ ಜಿಲ್ಲೆಗೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 8:45 IST
Last Updated 14 ಏಪ್ರಿಲ್ 2012, 8:45 IST

ಶನಿವಾರಸಂತೆ: ಉಳಿತಾಯದ ಮನೋಭಾವ ಮಾನವನಲ್ಲಿ ಮಾತ್ರವಲ್ಲ, ಪ್ರಾಣಿ, ಪಕ್ಷಿಗಳಲ್ಲೂ ಕಂಡು ಬರುತ್ತದೆ ಎಂದು ಬೆಂಗಳೂರಿನ ದಕ್ಷಿಣ ಕರ್ನಾಟಕ ವಲಯ ಅಂಚೆ ಸೇವೆಗಳ ಸಹಾಯಕ ನಿರ್ದೇಶಕ ವೇಣುಗೋಪಾಲ್ ಹೇಳಿದರು.

ಕೊಡಗು ಅಂಚೆ ವಿಭಾಗ ಮತ್ತು ಸೋಮವಾರಪೇಟೆ ಅಂಚೆ ಉಪವಿಭಾಗದ ವತಿಯಿಂದ ಶುಕ್ರವಾರ ಶನಿವಾರಸಂತೆಯ ಬಸಪ್ಪ ಸಭಾಂಗಣದಲ್ಲಿ ನಡೆದ `ಶನಿವಾರಸಂತೆ ಸಂಪೂರ್ಣ ಅಂಚೆ ಉಳಿತಾಯ ಹೋಬಳಿ~ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮನೆ-ಮನೆಗಳಲ್ಲೂ ಉಳಿತಾಯ ಮಾಡಬೇಕು. ಮಕ್ಕಳಲ್ಲೇ ಉಳಿತಾಯದ ಮನೋಭಾವ ಬೆಳೆಸಬೇಕು. ಅಂಚೆ ಇಲಾಖೆಯ ಮೂಲಕ ಮಾಡುವ ಉಳಿತಾಯ ಭವಿಷ್ಯಕ್ಕೆ ಸಹಾಯಕ ಎಂದು ಕರೆ ನೀಡಿದರು.

ಅಂಚೆ ನಿರೀಕ್ಷಕ ಎಸ್.ವಿ.ಮಂಜುನಾಥ್ ಮಾತನಾಡಿ, 13 ಸಾವಿರ ಉಳಿತಾಯ ಖಾತೆಗಳನ್ನು ತೆರೆಯುವ ಮೂಲಕ ಅಧಿಕ ಉಳಿತಾಯ ಮಾಡಿದ ಶನಿವಾರಸಂತೆ ಅಂಚೆ ಕಚೇರಿ ಜಿಲ್ಲೆಯಲ್ಲೇ ಪ್ರಥಮವೆನಿಸಿ ಅತ್ಯುತ್ತಮ ಸಾಧನೆ ಮಾಡಿದೆ ಎಂದರು.

ಕಂದಾಯ ಇಲಾಖೆ ಉಪತಹಶೀಲ್ದಾರ್ ಚಂದ್ರಮೌಳಿ ಮಾತನಾಡಿ, ಜೀವನದಲ್ಲಿ ಉಳಿತಾಯ ಮಾಡುವುದು ಉತ್ತಮ ವ್ಯವಸ್ಥೆ. ಉಳಿತಾಯ ಸದ್ವಿನಿಯೋಗವಾಗಬೇಕು.

ಕಾರ್ಯಕ್ರಮ ಉದ್ಘಾಟಿಸಿದ ಪಿಎಸ್‌ಐ ಮಹದೇವಯ್ಯ, ಜಿಲ್ಲಾ ಅಂಚೆ ವಿಭಾಗದ ಸಹಾಯಕ ನಿರ್ದೇಶಕ ರಾಜಶೇಖರಯ್ಯ, ಸಹಾಯಕ ಉಪ ಅಧೀಕ್ಷಕ ಕೆ.ವೀರಣ್ಣ ಮಾತನಾಡಿ, ಅಂಚೆ ಇಲಾಖೆಯಲ್ಲಿ ವಂಚನೆಯಿಲ್ಲ. ಪ್ರತಿ ಮನೆಯಲ್ಲೊಂದು ಉಳಿತಾಯದ ಖಾತೆ ತೆರೆಯಬೇಕೆಂಬ ಯೋಜನೆ ಹಮ್ಮಿಕೊಂಡಿದ್ದು ಯಶಸ್ವಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೊಡಗು ಅಂಚೆ ವಿಭಾಗ ಅಧೀಕ್ಷಕ ಕೆ.ರಾಮಲಿಂಗಯ್ಯ ಮಾತನಾಡಿ, ಉಳಿತಾಯದಲ್ಲೂ ವೈವಿಧ್ಯತೆ ಇದೆ. ಕಷ್ಟ ಕಾಲಕ್ಕಾಗಿ ಉಳಿತಾಯ ಮಾಡುವುದು ಅಗತ್ಯ.

ಸಮಸ್ಯೆಗಳಿಗೆ ಸ್ಪಂದಿಸುತ್ತ ಅಂಚೆ ಇಲಾಖೆಯವರು ಗ್ರಾಹಕರ ಮನವೊಲಿಸಿ ಉಳಿತಾಯ ಮಾಡಿಸಬೇಕು ಎಂದರು. ಈ ಸಂದರ್ಭದಲ್ಲಿ ಸಣ್ಣ ಉಳಿತಾಯ ಖಾತೆದಾರರಿಗೆ ಪಾಸ್ ಪುಸ್ತಕ ಹಾಗೂ ಸಿಬ್ಬಂದಿ ವರ್ಗದವರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.

ಸೋಮವಾರಪೇಟೆ ಉಪವಿಭಾಗದ ಅಂಚೆ ನಿರೀಕ್ಷಕ ಎಚ್.ಜೆ.ಸೋಮಯ್ಯ, ಶನಿವಾರಸಂತೆ ಉಪ ಅಂಚೆ ಪಾಲಕ ಎಚ್.ಎ.ರಾಮಣ್ಣ, ಶನಿವಾರಸಂತೆ ಅಂಚೆ ಕಚೇರಿ ಹಾಗೂ ಹೋಬಳಿಯ ವಿವಿಧ ಗ್ರಾಮಗಳ ಅಂಚೆ ಕಚೇರಿಗಳ ಅಧಿಕಾರಿಗಳು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಅಂಚೆ ನಿರೀಕ್ಷಕ ಎಚ್.ಜೆ.ಸೋಮಯ್ಯ ಸ್ವಾಗತಿಸಿದರು. ಟಿ.ಪಿ.ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.
ಅಂಚೆ ನಿರೀಕ್ಷಕ ಚೇತನ್‌ಉತ್ತಯ್ಯ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ರಸ್ತೆಯಲ್ಲಿ ಮೆರವಣಿಗೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.