ADVERTISEMENT

ಸಮಾಜದಲ್ಲಿ ಬದಲಾವಣೆ ತಂದ ನಾರಾಯಣ ಗುರು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 8:45 IST
Last Updated 14 ಸೆಪ್ಟೆಂಬರ್ 2011, 8:45 IST

ಸಿದ್ದಾಪುರ: ಶ್ರೀ ನಾರಾಯಣ ಗುರುವಿನ ಜೀವನ ಮತ್ತು ಸಂದೇಶವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕಿನಲ್ಲಿ ಸಾರ್ಥಕತೆ ಹಾಗೂ ಸ್ವಾರ್ಥದಿಂದ ದೂರ ಉಳಿಯಬಹುದು ಎಂದು ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಹೇಳಿದರು.

ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ವತಿಯಿಂದ ಮಂಗಳವಾರ 157ನೇ ಶ್ರೀ ನಾರಾಯಣ ಗುರು ಜಯಂತಿ  ಹಾಗೂ  ಸಹಕಾರ ಬ್ಯಾಂಕ್ ಉದ್ಘಾಟಿಸಿ ಮಾತನಾಡಿದರು.

ನಾರಾಯಣ ಗುರುಗಳ ತತ್ವ ಮತ್ತು ಸಿದ್ದಾಂತ ಪಾಲನೆ ಮಾಡುವುದರಿಂದ  ಸಮಾಜದ ನವ ನಿರ್ಮಾಣ ಸಾಧ್ಯ. ಎಸ್‌ಎನ್‌ಡಿಪಿ ಸಿದ್ದಾಪುರದಲ್ಲಿ ಬ್ಯಾಂಕ್ ಸ್ಥಾಪಿಸಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರ, ಕೃಷಿಕರ ಬೆಳವಣಿಗೆಗೆ ಮಹತ್ವದ ಪಾತ್ರವಹಿಸುತ್ತಿದೆ ಎಂದರು.

ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ  ಬೋದಸ್ವರೂಪಾನಂದ ಮಹರಾಜ್ ಮಾತನಾಡಿ, ನಾರಾಯಣ ಗುರುಗಳು ಬುದ್ಧ, ಬಸವಣ್ಣ ಇವರ ಸಮಕಾಲಿನ ವ್ಯಕ್ತಿಯಾಗಿದ್ದಾರೆ. ನಾರಾಯಣ ಗುರು ಸಮಾಜದಲ್ಲಿ ಸಂಚಲನ ಮತ್ತು ಬದಲಾವಣೆ  ತಂದ ವ್ಯಕ್ತಿ ಎಂದರು.

ಜಿಲ್ಲಾ ಎಸ್‌ಎನ್‌ಡಿಪಿ ಯೂನಿಯನ್, ಜಿಲ್ಲಾ ಎಸ್‌ಎನ್‌ಡಿಪಿ ಮಹಿಳಾ ಸಂಘ, ಶ್ರೀ ನಾರಾಯಣ ಗುರು ಆಚರಣಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾದ ನಾರಾಯಣ ಗುರು ಜಯಂತಿಯು ಗುರುಪೂಜೆ ಮಾಡುವುದರೊಂದಿಗೆ ಆರಂಭಗೊಂಡಿತ್ತು.  ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಎಸ್‌ಎನ್‌ಡಿಪಿ ಉಪಾಧ್ಯಕ್ಷ ಟಿ.ಆರ್. ಸೋಮನಾಥ್ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.

ನಗರದಲ್ಲಿ ಸಾಗಿದ ಶೋಭಾಯಾತ್ರೆ ಕಣ್ಮನ ಸೆಳೆಯಿತು. ಜಯಂತಿ ಅಂಗವಾಗಿ ಸಿದ್ದಾಪುರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಒಳ ರೋಗಿಗಳಿಗೆ ಯೂನಿಯನ್ ಅಧ್ಯಕ್ಷ ಕೆ.ಎನ್.ವಾಸು ಹಾಗು ಆಚರಣಾ ಸಮಿತಿ ಅಧ್ಯಕ್ಷ ವಿ.ಮನೋಹರ್ ಹಣ್ಣು ವಿತರಿಸಿದರು.

 ಜಿಲ್ಲಾ ಎಸ್‌ಎನ್‌ಡಿಪಿ ಅಧ್ಯಕ್ಷ ಕೆ.ಎನ್.ವಾಸು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳಿಂದ ಚುನಾಯಿತಗೊಂಡಿರುವ  ಸದಸ್ಯರುಗಳನ್ನು ಹಾಗೂ ಹೆಚ್ಚಿನ ಅಂಕ  ಪಡೆದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತ್ತು.

ಮುಖ್ಯ ಅಥಿತಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಕಸಾಪ ಅಧ್ಯಕ್ಷ ಟಿ.ಪಿ.ರಮೇಶ್, ಸೋಮವಾರಪೇಟೆ ತಾ.ಪಂ ಅಧ್ಯಕ್ಷ ವಿ.ಕೆ.ಲೋಕೇಶ್, ಡಾ. ಶಿವನ್, ಟಿ.ಎನ್.ಬಾಬು, ಕೆ.ಕೆ.ಕುಟ್ಟಪ್ಪನ್, ಟಿ.ಕೆ. ಸೋಮನಾಥನ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ಸಜೀವನ್ ಸ್ವಾಗತಿಸಿದರು. ಕೆ.ಜಿ.ಪದ್ಮನಾಭನ್ ವಂದಿಸಿದರು. ಕುಮಾರಿ ರೀಜಾ ಟಿ.ಆರ್.  ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.