ಗೋಣಿಕೊಪ್ಪಲು: ‘ಸಿನಿಮಾ ವೀಕ್ಷಣೆಯಿಂದ ಮನಸ್ಸು ಹಗುರವಾಗಲಿದೆ. ವಾಣಿಜ್ಯೇತರ ಸಿನಿಮಾಗಳು ಮನುಷ್ಯನ ವ್ಯಕ್ತಿತ್ವವನ್ನು ಬದಲಾಯಿಸಲಿವೆ’ ಎಂದು ಪೊನ್ನಂಪೇಟೆ ಹೋಬಳಿ ಕಸಾಪ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಅಭಿಪ್ರಾಯಪಟ್ಟರು.
ಇಲ್ಲಿನ ಕಾಮತ್ ನವಮಿ ಸಭಾಂಗಣದಲ್ಲಿ ಬೆಳ್ಳಿಮಂಡಲ ಚಿತ್ರಸಮಾಜ ಮತ್ತು ಪೊನ್ನಂಪೇಟೆ ಜೇಸಿ ನಿಸರ್ಗ ಮಂಗಳವಾರ ಸಂಜೆ ಆಯೋಜಿಸಿದ್ದ ‘ತಿರುಗಾಟ’ ಚಿತ್ರ ಪ್ರದರ್ಶನ ಮತ್ತು ಸಂವಾದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಬದುಕಿನ ದಿಕ್ಕನ್ನು ಬದಲಾಯಿಸುವ ಶಕ್ತಿ ಉತ್ತಮ ಚಿತ್ರಗಳಿಗೆ ಇದೆ. ಸಿನಿಮಾ ನೋಡುವಾಗ ಆಯ್ಕೆ ಮುಖ್ಯ’ ಎಂದು ಹೇಳಿದರು.
ಪ್ರಶಸ್ತಿ ವಿಜೇತ ಚಿತ್ರಗಳಾದ ಆಫ್ರಿಕಾದ ‘ಇಂಙ ದಿ ಡಾಗ್, ಮೆಷಾ ಮತ್ತು ಅಮೇರಿಕ ದಿ ಸೋಲೋ ಸಿನಿಮಾಗಳನ್ನು ವೀಕ್ಷಿಸಿ ಮಾತನಾಡಿದ ಕಾವೇರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಸಿ.ರಾಜು, ‘ಉತ್ತಮ ಸಮಾಜ ನಿರ್ಮಾಣಕ್ಕೆ ಸದಭಿರುಚಿಯ ಸಿನಿಮಾಗಳ ಅಗತ್ಯವಿದೆ. ಯುವಜನಾಂಗವನ್ನು ಉತ್ತಮ ಹಾದಿಯತ್ತ ಕೊಂಡೊಯ್ಯುವ ಹೊಣೆಗಾರಿಕೆ ಮಾಧ್ಯಮಗಳ ಮುಖ್ಯ ಕರ್ತವ್ಯವಾಗಿದೆ’ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬೆಳ್ಳಿಮಂಡಲ ಚಿತ್ರ ಸಮಾಜದ ಜಿಲ್ಲಾ ಸಂಚಾಲಕ ಅಲ್ಲಾರಂಡ ವಿಠಲ ನಂಜಪ್ಪ, ‘ಸಿನಿಮಾ ನೋಡುವ ಅಭಿರುಚಿ ಮೂಡಿಸುವುದು ಮತ್ತು ಅದರಲ್ಲಿರುವ ಒಳ್ಳೆಯ ಅಂಶಗಳನ್ನು ಬದುಕಿಗೆ ಅಳವಡಿಸಿಕೊಳ್ಳುವ ಬಗೆಯನ್ನು ತಿಳಿಸುವುದು ಚಿತ್ರೋತ್ಸವದ ಮುಖ್ಯ ಉದ್ದೇಶವಾಗಿದೆ. ಸಿನಿಮಾಗಳು ಬದುಕಿಗೆ ಹೇಗೆ ಮಾದರಿ ಎಂಬ ಬಗ್ಗೆ ಆಲೋಚಿಸುವ ಮತ್ತು ಚಿಂತಿಸುವ ಮುಖ್ಯ ಅಂಶವೂ ಇದರಲ್ಲಿ ಅಡಗಿದೆ’ ಎಂದರು.
‘ತಿರುಗಾಟ ಸಿನಿಮಾ ಪ್ರದರ್ಶನ ಕಾರ್ಯಕ್ರಮವನ್ನು ಮೊದಲಿಗೆ ಗೋಣಿಕೊಪ್ಪಲಿನಿಂದ ಆರಂಭಿಸಲಾಗಿದೆ. ಜಿಲ್ಲೆಯಾದ್ಯಂತ ಪ್ರಶಸ್ತಿ ವಿಜೇತ ಸಿನಿಮಾ ಪ್ರದರ್ಶನ ನಡೆಸಿ, ಈ ತಿಂಗಳ ಕೊನೆಯ ವಾರದಲ್ಲಿ ಮಡಿಕೇರಿಯಲ್ಲಿ ಜಿಲ್ಲಾಮಟ್ಟದ ಚಿತ್ರೋತ್ಸವ ನಡೆಸಲಾಗುವುದು’ ಎಂದರು. ಹಿರಿಯ ವೈದ್ಯ ಡಾ.ಕೆ.ಕೆ.ಶಿವಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್, ಡಾ.ಕಿರಣ್, ರವೀಂದ್ರ ಕಾಮತ್, ಗ್ರಾ.ಪಂ. ಸದಸ್ಯೆ ರೀನಾ, ಎಸ್.ಎಸ್.ತಿಮ್ಮಯ್ಯ, ಕೆ.ಬಿ.ಸಂಜು, ಪಿ.ಟಿ.ಸೈಮನ್, ನಿಸರ್ಗ ಜೇಸಿ ಉಪಾಧ್ಯಕ್ಷ ಮಧೂಶ್ ಪೂವಯ್ಯ, ಸದಸ್ಯರಾದ ಟಾಟು ಮೊಣ್ಣಪ್ಪ, ಬಿ.ಎನ್.ಪೃಥ್ಯೂ, ಗೋಣಿಕೊಪ್ಪಲು ಜೇಸಿ ಅಧ್ಯಕ್ಷ ಮಧುಮಾಚಯ್ಯ ಮುಂತಾದವರು ಹಾಜರಿದ್ದರು. ನಿಸರ್ಗ ಜೇಸಿ ಅಧ್ಯಕ್ಷ ರಫೀಕ್ ತೂಚಮಕೇರಿ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.