ಮಡಿಕೇರಿ: ಒಂದೇ ಸೂರಿನಡಿ 12 ಬಗೆಯ ಮಾವು, 4 ಬಗೆಯ ಹಲಸು, ಮಾವು, ಹಲಸಿನ ವೈವಿಧ್ಯಮಯ ತಳಿಗಳ ಸಸಿಗಳು ಇವೆಲ್ಲವೂ ಈಗ ಹಾಪ್‌ಕಾಮ್ಸ್ ಅಂಗಳದಲ್ಲಿ ಲಭ್ಯವಿದ್ದು, ಮಾವುಪ್ರಿಯರನ್ನು ಸೂರೆಗೊಂಡಿವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಹಾಪ್‍ಕಾಮ್ಸ್ ವತಿಯಿಂದ ಇಲ್ಲಿನ ಹಾಪ್‌ಕಾಮ್ಸ್ ಆವರಣದಲ್ಲಿ ಶುಕ್ರವಾರ ಆರಂಭವಾದ ಮಾವು ಮತ್ತು ಹಲಸು ಮೇಳದಲ್ಲಿ ಒಟ್ಟು 22 ಮಳಿಗೆಗಳಿದ್ದು, ಅದರಲ್ಲಿ ರಾಮನಗರ, ಚನ್ನಪಟ್ಟಣ, ಕನಕಪುರ, ಮಂಡ್ಯ ಹಾಗೂ ರಾಜ್ಯದ ಇತರೆಡೆಗಳಿಂದ ಬಂದ ಬೆಳೆಗಾರರು ಮಾವು ಮತ್ತು ಹಲಸು ಮಾರಾಟದಲ್ಲಿ ತೊಡಗಿದ್ದಾರೆ. ಈ ಮೇಳವು ಮೇ 26ರವರೆಗೂ ನಡೆಯಲಿದೆ.
ಇಲ್ಲಿ ಮಲಗೋವಾ, ಸಿಂಧೂರ, ರಸಪೂರಿ, ತೋತಾಪುರಿ, ಬಾದಾಮಿ, ಮಲ್ಲಿಕಾ, ದಸೇರಿಯಂತಹ ತಳಿಗಳೊಂದಿಗೆ ಆಲ್ಫೋನ್ಸೊ, ಇಮಾಮ್ ಪಸಂದ್, ಕೇಸರ್‌ನಂತಹ ಅಪರೂಪದ ತಳಿಗಳೂ ಇವೆ. ಕಾಲಾಪಾಡಿ ಎಂಬ ತಳಿ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಕೆ.ಜಿಗೆ ₹ 50ರಿಂದ ₹ 300ರವರೆಗೂ ದರ ನಿಗದಿಯಾಗಿದೆ.
ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ‘ಮಾವು ಮತ್ತು ಹಲಸು ಮೇಳವನ್ನು ಈ ವರ್ಷವೂ ನಾಲ್ಕು ದಿನಗಳವರೆಗೆ ಏರ್ಪಡಿಸಲಾಗಿದೆ. ಕೊಡಗಿನ ಜನರಿಗೆ ಬೇರೆ ಬೇರೆ ರೀತಿಯ ಮಾವಿನ ಹಣ್ಣುಗಳು ಒಂದೇ ಕಡೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಆರ್.ಯೋಗೇಶ್ ಮಾತನಾಡಿ, ‘ನೈಸರ್ಗಿಕವಾಗಿ ಮಾಗಿಸಿದ ಕಾರ್ಬೈಡ್ ಮುಕ್ತ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ಮಾವು ಮೇಳದ ಉದ್ದೇಶವಾಗಿದೆ’ ಎಂದು ತಿಳಿಸಿದರು.
ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಉಪಾಧ್ಯಕ್ಷರಾದ ಮಲ್ಲಂಡ ಮಧುದೇವಯ್ಯ, ನಿರ್ದೇಶಕರಾದ ನಾಗೇಶ್ ಕುಂದಲ್ಪಾಡಿ, ಬಿ.ಎ.ಹರೀಶ್, ಎಸ್.ಪಿ.ಪೊನ್ನಪ್ಪ, ಬೇಬಿ ಪೂವಯ್ಯ, ಎಂ.ಮನೋಹರ್, ಸುವಿನ್ ಗಣಪತಿ, ಉಮೇಶ್‍ರಾಜ ಅರಸ್, ಸುಧೀರ್, ಹಾಪ್‍ಕಾಮ್ಸ್ ಸಿಇಒ ರೇಷ್ಮ ಗಿರೀಶ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮುತ್ತಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.