ADVERTISEMENT

ನಿವೇಶನ ರಹಿತರಿಂದ 1,300 ಅರ್ಜಿ

ಸರ್ಕಾರದ ವಿವಿಧ ಉದ್ದೇಶಕ್ಕೆ 359 ಎಕರೆ ಭೂಮಿ ಗುರುತು: ಡಾ.ಬಿ.ಸಿ.ಸತೀಶ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 6:19 IST
Last Updated 27 ಡಿಸೆಂಬರ್ 2022, 6:19 IST
ಮಡಿಕೇರಿಯಲ್ಲಿ ಸೋಮವಾರ ನಡೆದ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಸಂಬಂಧ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿದರು. ಜಿ.ಪಂ ಸಿಇಒ ಡಾ.ಎಸ್.ಆಕಾಶ್, ಎಡಿಸಿ ಡಾ.ನಂಜುಂಡೇಗೌಡ ಇದ್ದಾರೆ
ಮಡಿಕೇರಿಯಲ್ಲಿ ಸೋಮವಾರ ನಡೆದ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಸಂಬಂಧ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿದರು. ಜಿ.ಪಂ ಸಿಇಒ ಡಾ.ಎಸ್.ಆಕಾಶ್, ಎಡಿಸಿ ಡಾ.ನಂಜುಂಡೇಗೌಡ ಇದ್ದಾರೆ   

ಮಡಿಕೇರಿ: ‘ಕೊಡಗು ಜಿಲ್ಲೆಯಲ್ಲಿ 1,300ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ವಿವಿಧ ಗ್ರಾಮ ಪಂಚಾಯಿತಿಗಳ ಗ್ರಾಮ ಸಭೆಗಳಲ್ಲಿ ನಿವೇಶನ ರಹಿತರನ್ನು ಆಯ್ಕೆ ಮಾಡಿದರೆ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬಹುದು’ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಸಂಬಂಧ ಸೋಮವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಿತಿ ಸದಸ್ಯ ಪಳನಿ ಪ್ರಕಾಶ್ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿವೇಶನ ರಹಿತರಿಗೆ ನಿವೇಶನ ಒದಗಿಸಬೇಕು ಎಂದು ಮಾಡಿದ ಮನವಿಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.

ADVERTISEMENT

‘ಜಿಲ್ಲೆಯಲ್ಲಿ ವಿವಿಧ ಕಡೆಗಳಲ್ಲಿ ಸುಮಾರು 359 ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಲಾಗಿದ್ದು, ಸರ್ಕಾರದ ವಿವಿಧ ಉದ್ದೇಶಗಳಿಗೆ, ಮಾಜಿ ಸೈನಿಕರಿಗೆ ಹಾಗೂ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಶೇ 10 ರಿಂದ 20 ರಷ್ಟು ಭೂಮಿಯನ್ನು ಮಾಜಿ ಸೈನಿಕರಿಗೆ ಕಾಯ್ದಿರಿಸಲು ನಿರ್ಧರಿಸಲಾಗಿದೆ’ ಎಂದರು.

‘ಸರ್ಕಾರಿ ಕಚೇರಿಗಳು, ವಸತಿ ಶಾಲೆಗಳು, ಅಂಗನವಾಡಿ, ಸಮುದಾಯ ಭವನ, ಮಾಜಿ ಸೈನಿಕರು, ಹಾಗೆಯೇ ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಜಿಲ್ಲೆಯ ವಿವಿಧ ಕಡೆಗಳಲ್ಲಿ ಗುರುತಿಸಿರುವ ಸರ್ಕಾರಿ ಭೂಮಿಯನ್ನು ಬಳಕೆ ಮಾಡಲಾಗುವುದು’ ಎಂದು ಹೇಳಿದರು.

‘ಅರುವತ್ತೋಕ್ಲು ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಕಾರೆಕಾಡು ಗಿರಿಜನ ಕಾಲೊನಿಯಲ್ಲಿ ಒಂದು ತಿಂಗಳ ಒಳಗೆ ಶೌಚಾಲಯ ಕಾಮಗಾರಿ ಪೂರ್ಣಗೊಳಿ ಸುವಂತೆಯೂ’ ತಾಕೀತು ಮಾಡಿದರು.

‘ಜಿಲ್ಲಾ ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕೂಡಲೇ ಜಾಗ ಒದಗಿಸಬೇಕು’ ಎಂದು ಹಶೀಲ್ದಾರರಿಗೆ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಮಾತನಾಡಿ, ‘ಜಿಲ್ಲಾ ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ₹ 4 ಕೋಟಿ ಅನುದಾನ ವಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಸಮಿತಿ ಸದಸ್ಯರಾದ ಸುಕುಮಾರ್, ಜಾಯ್ಸ್ ಮೆನೇಜಸ್, ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ, ಡಿವೈಎಸ್‍ಪಿ ಗಜೇಂದ್ರ ಪ್ರಸಾದ್, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಜಗದೀಶ್, ತಹಶೀಲ್ದಾರ್ ಮಹೇಶ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವ ಹಣಾಧಿಕಾರಿಗಳಾದ ಅಪ್ಪಣ್ಣ, ಜಯಣ್ಣ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಇದ್ದರು.

ಬಳಿಕ ಜಿಲ್ಲಾಧಿಕಾರಿ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನಾ ಕಾರ್ಯಕ್ರಮ ಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸು ವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಪೌರಕಾರ್ಮಿಕರ ಕುಂದುಕೊರತೆ ಆಲಿಸಿದ ಜಿಲ್ಲಾಧಿಕಾರಿ: ಪೌರಕಾರ್ಮಿ ಕರ ಕುಂದು ಕೊರತೆಯನ್ನು ಆಲಿಸಿದ ಜಿಲ್ಲಾಧಿಕಾರಿ ಅವರು, ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆ ಯಡಿ ಮನೆ ನಿರ್ಮಿಸಲಾ ಗುವುದು. ಸರ್ಕಾರ ನೀಡುವ ಹಣದ ಜೊತೆಗೆ ಸ್ವತಃ ಮನೆ ನಿರ್ಮಿಸಿಕೊಳ್ಳಲು ಮುಂದೆ ಬಂದಲ್ಲಿ ಅದಕ್ಕೂ ಅವಕಾಶ ಮಾಡಲಾಗುವುದು ಎಂದರು.

ಪೌರಕಾರ್ಮಿಕರಾದ ಓಬಳಿ ಅವರು ಆರೋಗ್ಯ ವಿಮೆ ಭರಿಸಿಕೊಡುವಂತೆ ಕೋರಿದರು. ಪೌರಕಾರ್ಮಿಕರಾದ ಲೋಕೇಶ್ ಮತ್ತು ಪುಟ್ಟಮ್ಮ ಅವರು ಪೌರಕಾರ್ಮಿಕರಿಗೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ನಿವೃತ್ತ ಪೌರ ಕಾರ್ಮಿಕರಿಗೂ ಮನೆ ಒದಗಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.