ಸಿದ್ದಾಪುರ: ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಬುಧವಾರ ನಡೆಯಿತು.
ಪುಲಿಯೇರಿ, ಗುಹ್ಯ ಗ್ರಾಮದಲ್ಲಿ ಬೀಡುಬಿಟ್ಟ 4 ಮರಿ ಆನೆಗಳು ಸೇರಿದಂತೆ ಸುಮಾರು 8 ಕಾಡಾನೆಗಳನ್ನು ವಿರಾಜಪೇಟೆ ಮುಖ್ಯ ರಸ್ತೆಯ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸುತ್ತ ಕಾಡಿನತ್ತ ಓಡಿಸಿದರು. ಈ ವೇಳೆ ವಾಹನಗಳ ಓಡಾಟವನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಮರಿ ಆನೆಗಳು ಸೇರಿದಂತೆ ಕೆಲವು ಕಾಡಾನೆಗಳನ್ನು ಗುಹ್ಯ ಗ್ರಾಮದಿಂದ ಬಜೆಗೊಲ್ಲಿ ಮೂಲಕ ಕಾಡಿಗೆ ಕಳುಹಿಸಲಾಯಿತು.
ಬುಧವಾರದ ಕಾರ್ಯಾಚರಣೆಯಲ್ಲಿ ಸುಮಾರು 20 ಆನೆಗಳನ್ನು ಕಾಡಿಗೆ ಓಡಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಶಿವರಾಂ ತಿಳಿಸಿದ್ದಾರೆ.
ಗುಹ್ಯ ಗ್ರಾಮದಲ್ಲಿ ಮೂರು ಕಾಡಾನೆಗಳ ಹಿಂಡೊಂದು ಬೀಡುಬಿಟ್ಟಿದ್ದು, ಕಾಡಿಗಟ್ಟಲು ಮುಂದಾದ ಇಲಾಖೆಯ ಸಿಬ್ಬಂದಿಯ ಮೇಲೆ ದಾಳಿಗೆ ಮುಂದಾಗಿದೆ. ಸಿಬ್ಬಂದಿ ಹರಸಾಹಸಪಟ್ಟರೂ ಕಾಡಾನೆಗಳು ತೋಟದಿಂದ ಕದಲದೇ ಅಲ್ಲೇ ಬೀಡುಬಿಟ್ಟಿವೆ. ಗುರುವಾರ ಗುಹ್ಯ ಗ್ರಾಮದಲ್ಲಿ ಬಾಕಿ ಇರುವ 3 ಕಾಡಾನೆಗಳನ್ನು ಹಾಗೂ ಕರಡಿಗೋಡು ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.