ADVERTISEMENT

ಮಡಿಕೇರಿ: ರಸ್ತೆ ವಿಸ್ತರಣೆಗಾಗಿ 206 ಮರ ಹನನಕ್ಕೆ ಸಿದ್ಧತೆ

ಕೊಡಗು ಜಿಲ್ಲೆಯ ದುಂಡಳ್ಳಿಯಿಂದ ಯಸಳೂರು, ಕ್ಯಾತೆ, ಕೊಡ್ಲಪೇಟೆ ರಸ್ತೆ ಅಭಿವೃದ್ಧಿಗಾಗಿ ಪ್ರಸ್ತಾವ

ಕೆ.ಎಸ್.ಗಿರೀಶ್
Published 25 ಫೆಬ್ರುವರಿ 2024, 5:57 IST
Last Updated 25 ಫೆಬ್ರುವರಿ 2024, 5:57 IST
ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ದುಂಡಳ್ಳಿಯಿಂದ ಯಸಳೂರು, ಕ್ಯಾತೆ, ಕೊಡ್ಲಿಪೇಟೆ ರಸ್ತೆಯಲ್ಲಿರುವ ಮರಗಳು
ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ದುಂಡಳ್ಳಿಯಿಂದ ಯಸಳೂರು, ಕ್ಯಾತೆ, ಕೊಡ್ಲಿಪೇಟೆ ರಸ್ತೆಯಲ್ಲಿರುವ ಮರಗಳು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 7.7 ಕಿ.ಮೀ ಉದ್ದದ ರಸ್ತೆಯ ವಿಸ್ತರಣೆಗಾಗಿ 206 ಮರಗಳನ್ನು ಕಡಿಯಲು ಲೋಕೋಪಯೋಗಿ ಇಲಾಖೆಯು ಸಲ್ಲಿಸಿರುವ ಪ್ರಸ್ತಾವದ ಮೇರೆಗೆ, ಅರಣ್ಯ ಇಲಾಖೆ ಸಾರ್ವಜನಿಕರಿಂದ ಆಕ್ಷೇಪಗಳನ್ನು ಆಹ್ವಾನಿಸಿದೆ.

ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ದುಂಡಳ್ಳಿಯಿಂದ ಯಸಳೂರು, ಕ್ಯಾತೆ, ಕೊಡ್ಲಿಪೇಟೆ ರಸ್ತೆ ಅಭಿವೃದ್ಧಿಗಾಗಿ ₹ 9.85 ಕೋಟಿ ಮೊತ್ತದ ಯೋಜನೆಗೆ ಮಂಜೂರಾತಿ ದೊರೆತಿದೆ. ಅದಕ್ಕಾಗಿ 200 ಕಾಡು ಜಾತಿ ಮರಗಳು ಹಾಗೂ 6 ಬೀಟೆಗಳನ್ನು ಕಡಿಯುವ ಉದ್ದೇಶವಿದೆ. ಫೆ. 25ರ ಒಳಗೆ ಆಕ್ಷೇಪಣೆ ಸಲ್ಲಿಸುವಂತೆ ಅರಣ್ಯ ಇಲಾಖೆಯು ಪ್ರಕಟಣೆ ಹೊರಡಿಸಿದೆ.

‘ಈ ಮಾರ್ಗದಲ್ಲಿರುವ ಬಹುತೇಕ ಕಾಡು ಜಾತಿಯ ಮರಗಳನ್ನು ಆಶ್ರಯಿಸಿರುವ ಅಪಾರ ಪಕ್ಷಿ ಸಂಕುಲಕ್ಕೆ ನೆಲೆ ಇಲ್ಲದಂತಾಗುತ್ತದೆ’ ಎಂದು ಪರಿಸರಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

‘3 ಮೀಟರ್ ವಿಸ್ತೀರ್ಣದ ರಸ್ತೆಯಲ್ಲಿ ಎರಡು ಬಸ್‌ಗಳು ಏಕಕಾಲದಲ್ಲಿ ಸಂಚರಿಸಲು ಸಾಧ್ಯವಿಲ್ಲ. ರಸ್ತೆಯನ್ನು ರಾಜ್ಯ ಹೆದ್ದಾರಿಗೆ ಮೇಲ್ದರ್ಜೆಗೇರಿಸಿರುವುದರಿಂದ ಅಭಿವೃದ್ಧಿ ಅನಿವಾರ್ಯ’ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವೆಡೆ ಮರಗಳನ್ನು ಕಡಿಯಲೇಬೇಕು. ಆದರೂ ಕೆಲವನ್ನಾದರೂ ಉಳಿಸಲು ಪ್ರಯತ್ನಿಸಲಾಗುವುದು. ಸಸಿಗಳನ್ನು ನೆಡಲು ಯೋಜನೆಯ ಶೇ 1ರಷ್ಟು ಹಣವನ್ನು ಮೀಸಲಿಡಲಾಗಿದೆ ಎಂದರು.

‘ರಸ್ತೆ ಅಭಿವೃದ್ಧಿಯಾಗುವುದರಿಂದ ಅಪಘಾತಗಳು ಕಡಿಮೆಯಾಗುತ್ತವೆ. ಸಕಲೇಶಪುರಕ್ಕೆ ತೆರಳಲು ಅತ್ಯಂತ ಸಮೀಪದ ಹಾದಿಯಾಗುತ್ತದೆ. ಜೊತೆಗೆ, ಸುತ್ತಮುತ್ತಲ ಪ್ರದೇಶಗಳಲ್ಲಿ ಭೂಮಿಯ ಮೌಲ್ಯ ಹಚ್ಚುತ್ತದೆ. ಹೀಗಾಗಿ ರಸ್ತೆ ಅಭಿವೃದ್ಧಿ ಅಗತ್ಯ’ ಎಂಬುದು ಈ ಭಾಗದ ಜನ ಪ್ರತಿಪಾದನೆ.

‘ಸ್ಥಳ ಪರಿಶೀಲಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಡಿಸಿಎಫ್‌ ಭಾಸ್ಕರ್ ಪ್ರತಿಕ್ರಿಯಿಸಿದರು.

ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ದುಂಡಳ್ಳಿಯಿಂದ ಯಸಳೂರು ಕ್ಯಾತೆ ಕೊಡ್ಲಿಪೇಟೆ ರಸ್ತೆಯಲ್ಲಿರುವ ಮರಗಳು
ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ದುಂಡಳ್ಳಿಯಿಂದ ಯಸಳೂರು ಕ್ಯಾತೆ ಕೊಡ್ಲಿಪೇಟೆ ರಸ್ತೆಯಲ್ಲಿರುವ ಬೃಹತ್ ಗಾತ್ರದ ಮರಗಳು

ಹಕ್ಕಿಗಳ ಆಶ್ರಯ ತಾಣವಾದ ಮರಗಳು ರಸ್ತೆ ಅಭಿವೃದ್ಧಿ ಅಗತ್ಯ: ಜನರ ಪ್ರತಿಪಾದನೆ

ರಸ್ತೆ ಅಭಿವೃದ್ಧಿಯಾಗಬೇಕು ನಿಜ. ಆದರೆ ಅದರಿಂದ ಪ್ರಕೃತಿಗೆ ಆಗುವ ನಷ್ಟವನ್ನು ಭರಿಸಿಕೊಡುವ ಜವಾಬ್ದಾರಿಯನ್ನು ಆಯಾ ಇಲಾಖೆಗಳೇ ಹೊರಬೇಕು

-ಡಾ.ನರಸಿಂಹನ್ ಪಕ್ಷಿತಜ್ಞರು.

ಮರಗಳನ್ನು ಉಳಿಸಿಕೊಂಡೇ ರಸ್ತೆ ಅಭಿವೃದ್ಧಿ ಮಾಡುವ ವೈಜ್ಞಾನಿಕ ವಿಧಾನಗಳ ಕಡೆಗೆ ಸರ್ಕಾರ ಗಮನ ಹರಿಸಬೇಕು

-ಗೌತಮ್ ಕಿರಂಗದೂರು ನಾವು ಪ್ರತಿಷ್ಠಾನದ ಸಂಸ್ಥಾಪಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.