ADVERTISEMENT

28ರಂದು ಕೊಡಗಿನಲ್ಲಿ ಹುತ್ತರಿ ಹಬ್ಬ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 8:00 IST
Last Updated 14 ನವೆಂಬರ್ 2012, 8:00 IST

ನಾಪೋಕ್ಲು: ಕೊಡಗಿನ ಪ್ರಸಿದ್ಧ ಹಬ್ಬವಾದ ಹುತ್ತರಿ ಹಬ್ಬವನ್ನು ನ. 28 ರಂದು ಆಚರಿಸಲು ಮಂಗಳವಾರ ಸಮೀಪದ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ  ನಿಶ್ಚಯಿಸಲಾಯಿತು.

ಹಿಂದಿನಿಂದ ನಡೆದು ಬಂದ ಸಂಪದಾಯದಂತೆ ಪಾಡಿಯ ಇಗ್ಗುತ್ತಪ್ಪ ದೇವಾಲಯದಲ್ಲಿ ಅಮ್ಮಂಗೇರಿಯ ಜ್ಯೋತಿಷಿ ಶಶಿಕುಮಾರ್ ಶಾಸ್ತ್ರೋಕ್ತವಾಗಿ ಹುತ್ತರಿ ಹಬ್ಬ ನಡೆಯುವ ಶುಭಘಳಿಗೆಯನ್ನು ನಿಶ್ಚಯಿಸಿದರು. ನ. 28ರಂದು ಸಂಜೆ 7.05ಕ್ಕೆ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ನೆರೆ ಕಟ್ಟುವುದು, 8.05ಕ್ಕೆ ಕದಿರು ತೆಗೆಯಲು  ಹಾಗೂ 9.05ಕ್ಕೆ ಪ್ರಸಾದ ವಿತರಣೆಗೆ ಸೂಕ್ತ ಅವಧಿ ಎಂದು ನಿಶ್ಚಯಿಸಲಾಗಿದೆ. ಸಾರ್ವಜನಿಕರಿಗೆ ನೆರೆಕಟ್ಟಲು  ಸಂಜೆ 7.20, ಕದಿರು ತೆಗೆಯಲು 8.20 ಹಾಗೂ ಭೋಜನಕ್ಕೆ 9.20  ಸೂಕ್ತವಾದ ಸಮಯ ಎಂದು ನಿಗದಿಪಡಿಸಲಾಯಿತು.

ನ.27ರಂದು ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಕಲಾಡ್ಚ ಹಬ್ಬ ನಡೆಯಲಿದೆ. ಹುತ್ತರಿ ಹಬ್ಬಕ್ಕೆ ಸಂಬಂಧಿಸಿದಂತೆ ಪಾಡಿ ಇಗ್ಗುತ್ತಪ್ಪ ದೇವಾಲಯ ನೆಲಜಿ ಇಗ್ಗುತ್ತಪ್ಪ ದೇವಾಲಯ ಹಾಗೂ ಪೇರೂರಿನ ಇಗ್ಗುತ್ತಪ್ಪ ದೇವಾಲಯದ ಪ್ರಮುಖರು ಮಲ್ಮ ಬೆಟ್ಟದಲ್ಲಿ ಮಂಗಳವಾರ ಸಾಂಪ್ರದಾಯಿಕ ಪದ್ಧತಿಯನ್ನು ನೆರವೇರಿಸಿದರು.

ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವತಕ್ಕರಾದ ಪರದಂಡ ಚೆಂಗಪ್ಪ, ಭಕ್ತಜನಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪರದಂಡ ಕಾವೇರಪ್ಪ, ಹಿರಿಯರಾದ ಬಾಚಮಂಡ ಪೂವಯ್ಯ, ಕಂಬೇಯಂಡ ಸುಬ್ರಮಣಿ, ಕೋಡಿಮಣಿಯಂಡ ಸುರೇಶ್, ಕಣಿಯರ ನಾಣಯ್ಯ, ಅರ್ಚಕ ಕುಶಭಟ್, ಲವ ಭಟ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.