ADVERTISEMENT

29 ರಂದು ಅಂಬೇಡ್ಕರ್ ಭವನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 9:35 IST
Last Updated 24 ಏಪ್ರಿಲ್ 2012, 9:35 IST

ಮಡಿಕೇರಿ: ನಗರದ ಅಶೋಕಪುರ ಬಳಿ ನಿರ್ಮಾಣಗೊಂಡಿರುವ ಡಾ.ಅಂಬೇಡ್ಕರ್ ಭವನದ ಉದ್ಘಾಟನಾ ಸಮಾರಂಭ ಏ.29 ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಭವನ ಸಮಿತಿಯ ಅಧ್ಯಕ್ಷರೂ ಆಗಿರುವ ನಗರಸಭೆ ಅಧ್ಯಕ್ಷ ಎಚ್.ಎಂ. ನಂದಕುಮಾರ್ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳ ಹೋರಾಟದ ಫಲವಾಗಿ ಈ ಭವನದ ನಿರ್ಮಾಣ ಕಾರ್ಯ ಈಗ ಪೂರ್ಣಗೊಂಡಿದೆ ಎಂದರು. ಭವನದ ನಿರ್ಮಾಣಕ್ಕೆ ಹಲವು ಜನರು ಅಡ್ಡಿಪಡಿಸಿದ್ದರಿಂದ ಹಾಗೂ ಪ್ರಕರಣವು ಕೋರ್ಟ್ ಮೆಟ್ಟಿಲೇರಿದ ಪರಿಣಾಮವಾಗಿ ನಿರ್ಮಾಣ ಕಾರ್ಯ ವಿಳಂಬವಾಗಿತ್ತು ಎಂದು ವಿವರಿಸಿದರು.

ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಉದ್ಘಾಟನೆ ಮಾಡಲಿದ್ದಾರೆ. ಅತಿಥಿಗಳಾಗಿ ಸಂಸದ ಎಚ್.ವಿಶ್ವನಾಥ್, ಶಾಸಕ ಅಪ್ಪಚ್ಚು ರಂಜನ್, ಶಾಸಕ ಡಾ.ಜಿ. ಪರಮೇಶ್ವರ್, ವಿಧಾನ ಪರಿಷತ್ ಸದಸ್ಯ ಟಿ.ಜಾನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರವಿ ಕುಶಾಲಪ್ಪ, ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಅಣ್ಣಿಗೇರಿ, ಉದ್ಯಮಿ ಸುನಿಲ್ ಸುಬ್ರಮಣಿ, ನಿವೃತ್ತ ಜಿಲ್ಲಾಧಿಕಾರಿ ಎಚ್.ಭಾಸ್ಕರ್ ಇತರರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಎಚ್.ಆರ್. ಮುತ್ತಪ್ಪ, ಕಾರ್ಯದರ್ಶಿ ಎಚ್.ಎಲ್.ದಿವಾಕರ, ಸಹ ಕಾರ್ಯದರ್ಶಿ ಎಚ್.ಎಂ.ಜಯರಾಂ, ಖಜಾಂಜಿ ಎಚ್.ಆರ್. ನಾಗರಾಜು, ಸದಸ್ಯ ಎಚ್.ಎಂ.ಕೃಷ್ಣ ಉಪಸ್ಥಿತರಿದ್ದರು. 

`ರಾಜ್ಯ ಸರ್ಕಾರದಿಂದ ಬಿಡಿಗಾಸೂ ಬಂದಿಲ್ಲ~
ಹಲವು ಬಾರಿ ಮನವಿ ಮಾಡಿಕೊಂಡರೂ ಅಂಬೇಡ್ಕರ್ ಭವನದ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದಿಂದ ಇದುವರೆಗೆ ಬಿಡಿಗಾಸೂ ಬಂದಿಲ್ಲ ಎಂದು ನಂದಕುಮಾರ್ ಅಸಮಾಧಾನ ವ್ಯಕ್ತ ಪಡಿಸಿದರು.

ಭವನದ ನಿರ್ಮಾಣಕ್ಕಾಗಿ ನಗರ ಸಭೆಯಿಂದ ಇದುವರೆಗೆ ರೂ. 17.53 ಲಕ್ಷ, ಜಿಲ್ಲಾ ಪಂಚಾಯಿತಿ ವತಿಯಿಂದ ರೂ. 1 ಲಕ್ಷ, ಧನಂಜಯ್ ಕುಮಾರ್ ಅವರ ಕ್ಷೇತ್ರ ಅಭಿವೃದ್ಧಿ ನಿಧಿಯಿಂದ ರೂ. 50 ಸಾವಿರ, ದಾನಿಗಳಿಂದ ರೂ.75 ಸಾವಿರ, ಲಾಟರಿ ಯೋಜನೆಯಿಂದ ರೂ.94 ಸಾವಿರ, ಎಚ್.ಎಂ. ನಂದಕುಮಾರ್ ಅವರಿಂದ ಸಂಗ್ರಹಿಸಿದ ರೂ. 2 ಲಕ್ಷ ಸೇರಿದಂತೆ  ಒಟ್ಟು 25.87 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಅವರು ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT