ಮಡಿಕೇರಿ: ಕೊಡವ ಕುಟುಂಬಗಳ ಹಾಕಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಇದೇ 28ರಿಂದ ‘ಮುದ್ದಂಡ ಕಪ್‘ ಕೊಡವ ಕೌಟುಂಬಿಕ ಹಾಕಿ ಟೂರ್ನಿ ನಡೆಯಲಿದೆ. 370 ತಂಡಗಳು ಈಗಾಗಲೇ ನೋಂದಣಿ ಮಾಡಿಕೊಂಡಿವೆ.
ಈ ಟೂರ್ನಿಯು 25ನೇ ಆವೃತ್ತಿಯದಾಗಿದೆ. ಏಪ್ರಿಲ್ 27ರರೆಗೆ ಮೂರು ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ.
‘ಕಳೆದ ವರ್ಷ ಕುಂಡ್ಯೋಳಂಡ ಹಾಕಿ ಟೂರ್ನಿಯಲ್ಲಿ 360 ತಂಡಗಳು ಪಾಲ್ಗೊಂಡಿದ್ದವು. ಈ ಬಾರಿ 10 ತಂಡಗಳು ಹೆಚ್ಚುವರಿಯಾಗಿ ನೋಂದಣಿಯಾಗಿವೆ. ಮಾರ್ಚ್ 18ರವರೆಗೂ ನೋಂದಣಿಗೆ ಅವಕಾಶವಿದ್ದು, ಇನ್ನಷ್ಟು ತಂಡಗಳು ನೋಂದಾಯಿಸುವ ನಿರೀಕ್ಷೆ ಇದೆ. ಇದೊಂದು ದಾಖಲೆಯಾಗಲಿದೆ’ ಎಂದು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ. ಬೋಪಣ್ಣ ಇಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಟೂರ್ನಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ, ‘ಮಾರ್ಚ್ 25ರಿಂದ 28ರವರೆಗೆ ಕ್ರೀಡಾಜ್ಯೋತಿಯ ಮ್ಯಾರಥಾನ್ ನಡೆಯಲಿದೆ. ಕೊಡವ ಹಾಕಿ ಉತ್ಸವದ ಜನಕರಾದ ಕರಡ ಗ್ರಾಮದ ಪಾಂಡಂಡ ಕುಟುಂಬದ ಐನ್‌ಮನೆಯಲ್ಲಿ ಆರಂಭಗೊಳ್ಳುವ ಈ ಮ್ಯಾರಥಾನ್ ಇದುವರೆಗೂ ಟೂರ್ನಿ ಆಯೋಜಿಸಿರುವ ಕೊಡವ ಕುಟುಂಬಗಳಿಗೆ ಭೇಟಿ ನೀಡಲಿದೆ. ಇಷ್ಟೂ ದಿನವು ದೇಶದ ಪ್ರಮುಖ ಮ್ಯಾರಥಾನ್ ಪಟುಗಳು ಭಾಗಿಯಾಗಲಿದ್ದಾರೆ’ ಎಂದರು.
‘ಸೆಮಿಫೈನಲ್ ವೇಳೆ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ಲಾಲ್ ರಿಮ್ ಸಿಯಾಮಿ ಆಗಮಿಸಲಿದ್ದಾರೆ. ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹಾಗೂ ಒಲಂಪಿಯನ್ ಮನ್ ಪ್ರೀತ್ ಸಿಂಗ್ ಕೂಡ ಪಾಲ್ಗೊಳ್ಳಲಿದ್ದಾರೆ. ಈ ಬಾರಿ ಮಹಿಳಾ ತಂಡಗಳೂ ಪಾಲ್ಗೊಳ್ಳಲಿದ್ದು, 30 ತಂಡಗಳು ನೋಂದಾಯಿಸಿವೆ’ ಎಂದು ಮಾಹಿತಿ ನೀಡಿದರು.
‘ರಸಪ್ರಶ್ನೆ ಸ್ಪರ್ಧೆ, ವಧು–ವರರ ಅನ್ವೇಷಣೆ, ಸೈಕ್ಲೋಥಾನ್, ಮುಕ್ತ ಶೂಟಿಂಗ್ ಸ್ಪರ್ಧೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.