ಮಡಿಕೇರಿ: ಇಲ್ಲಿನ ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನಿಂದ ಸುಮಾರು 40 ಮಂದಿ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಅಶ್ರಫ್, ಇಸಾಕ್, ಮಂಜುನಾಥ್, ಮೋಹನ್ ಮೌರ್ಯ, ಗಣೇಶ್, ಲೀಲಾ ಶೇಷಮ್ಮ, ಸುನಂದಾ, ಸವಿತಾ, ಕವಿತಾ ಸೇರಿದಂತೆ ಹಲವು ಮಂದಿ ಮುಖಂಡರು ನಗರಸಭೆ ಸದಸ್ಯ ರಾಜೇಶ್ ಯಲ್ಲಪ್ಪ ಅವರ ನೇತೃತ್ವದಲ್ಲಿ ಪಕ್ಷಕ್ಕೆ ಬಂದರು. ಇವರನ್ನು ಶಾಸಕ ಡಾ.ಮಂತರ್‌ಗೌಡ ಪಕ್ಷಕ್ಕೆ ಬರಮಾಡಿಕೊಂಡರು.
ನಂತರ ಮಾತನಾಡಿದ ಅವರು, ‘ಕೊಡಗಿನಲ್ಲಿ ವಿಧಾನಸಭೆಯಲ್ಲಿ ಹೇಗೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದಿರೋ ಹಾಗೆಯೇ ಲೋಕಸಭೆಯಲ್ಲೂ ಗೆಲ್ಲಿಸಬೇಕು. ಯಾವುದೇ ಕಾರಣಕ್ಕೂ ಕಾರ್ಯಕರ್ತರು ಮೈಮರೆಯಬಾರದು’ ಎಂದು ಹೇಳಿದರು.
ವಿಧಾನಪರಿಷತ್ತಿನ ನಿಕಟಪೂರ್ವ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ‘ಹಿಂದಿನ ಚುನಾವಣೆಯಂತೆ ಕಾಂಗ್ರೆಸ್‌ನ್ನು ಗೆಲ್ಲಿಸುವ ಪಣವನ್ನು ಪಕ್ಷದ ಕಾರ್ಯಕರ್ತರು ತೊಡಬೇಕು’ ಎಂದು ತಿಳಿಸಿದರು.
ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ‘ಕಳೆದ ಬಾರಿಯೂ ವಿಧಾನಸಭಾ ಚುನಾವಣೆಯಲ್ಲಿ ಮೊದಲಿಗೆ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಮತದಾನದ ದಿನ ಸಮೀಪಿಸುತ್ತಿದ್ದಂತೆ ಸಾಮಾನ್ಯ ಜನರ ಒಲವು ಕಾಂಗ್ರೆಸ್‌ನತ್ತ ಬಂದಿತು. ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಖಚಿತ’ ಎಂದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜಾ ಉತ್ತಪ್ಪ ಮಾತನಾಡಿ, ‘ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿಗಳ ಕುರಿತು ಕಾರ್ಯಕರ್ತರು ಮನೆಮನೆಗೆ ತೆರಳಿ ಜನರಲ್ಲಿ ಅರಿವು ಮೂಡಿಸಬೇಕು. ಗ್ಯಾರಂಟಿಗಳಿಂದ ಸಾಮಾನ್ಯ ಜನರ ಬದುಕಿನಲ್ಲಿ ಆಗಿರುವ ಸಕಾರಾತ್ಮಕ ಬದಲಾವಣೆಯನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಒಂದು ವೇಳೆ ಅರ್ಹತೆ ಇದ್ದರೂ ಗ್ಯಾರಂಟಿ ಯೋಜನೆಗಳಲ್ಲಿ ಸೇರ್ಪಡೆಗೊಳ್ಳದಿದ್ದರೆ ಅಂತಹವರನ್ನು ಗುರುತಿಸಬೇಕು’ ಎಂದು ಹೇಳಿದರು.
ಶಶಿಧರ್ ಸೇರಿದಂತೆ ಅನೇಕ ಹಿರಿಯ ಮುಖಂಡರು ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.